ಸುರಕ್ಷತೆಯಲ್ಲಿ ನೈಋತ್ಯ ರೇಲ್ವೆ ಸಾಧನೆ
ಮೈಸೂರು: ರೇಲ್ವೆ ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮದಲ್ಲಿ ನೈಋತ್ಯ ರೇಲ್ವೆಯು ದೇಶದಲ್ಲಿಯೆ ಉತ್ತಮ ಸ್ಥಾನದಲ್ಲಿದೆ ಎಂದು ವಿಭಾಗೀಯ ರೇಲ್ವೆ ವ್ಯವಸ್ಥಾಪಕ ರಾಜಕುಮಾರ್ ಲಾಲ್ ಹೇಳಿದರು.
ವಿಭಾಗೀಯ ಕಚೇರಿಯ ನೈಋತ್ಯ ರೇಲ್ವೆ ಮೈಸೂರು ವಿಭಾಗೀಯ ಕಚೇರಿಯು ಶುಕ್ರವಾರ ಆಯೋಜಿಸಿದ್ದ 59ನೇ ರೇಲ್ವೆ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ವಿಭಾಗವು ಸುರಕ್ಷತೆಯಲ್ಲಿ ದಾಖಲೆ ನಿರ್ಮಿಸಿದೆ. ರೈಲಿನ ಸಮಯ ನಿರ್ವಹಣೆಯಲ್ಲಿ ಶೇ.98.80 ರಷ್ಟು ಗುರಿ ಮುಟ್ಟಿದ್ದೇವೆ. ಕಳೆದ ವರ್ಷ ಇದು ಶೇ.95.72 ಇತ್ತು. ಅಂತೆಯೇ ಈ ವರ್ಷ 5.40 ಕೋಟಿ ಪ್ರಯಾಣಿಕರಿಗೆ ಸೇವೆ ನೀಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.13.18 ರಷ್ಟು ಮಂದಿ ಪ್ರಯಾಣಿಕರು ಹೆಚ್ಚಿದ್ದಾರೆ. ಪ್ರಯಾಣಿಕರಿಂದ 196.75 ಕೋಟಿ ಗಳಿಸಲಾಗಿದೆ. ಕಳೆದ ಬಾರಿಗಿಂತ ಈ ಬಾರಿ 38.81 ಕೋಟಿ ಹೆಚ್ಚಿದೆ ಎಂದರು.
ಸರಕು ಸಾಗಣೆಯಿಂದ 251.54 ಕೋಟಿ ಲಭಿಸಿದೆ. ಟಿಕೆಟ್ ತಪಾಸಣೆಯಿಂದ 4.13 ಕೋಟಿ ದಂಡ ವಸೂಲಿ ಮಾಡಲಾಗಿದೆ. ಅಲ್ಲದೆ ಕಳೆದ ಮಾರ್ಚ್‌ನಲ್ಲಿ ಚೆನ್ನೈ ಮಾಸ್ಕೋ ಎಕ್ಸ್‌ಪ್ರೆಸ್ ಮತ್ತು ಮೈಸೂರು- ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ನಲ್ಲಿ ನಡೆಯಲಿದ್ದ ಡಕಾಯಿತಿಯನ್ನು ತಪ್ಪಿಸುವಲ್ಲಿ ಆರ್‌ಪಿಎಫ್ ಪಡೆ ಯಶಸ್ವಿಯಾಗಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಕಳೆದ ಆಯವ್ಯಯದಲ್ಲಿ 8 ಹೊಸ ರೈಲು ಮಾರ್ಗವನ್ನು ಮೈಸೂರಿಗೆ ವಿಸ್ತರಿಸಿದೆ. ವಿಭಾಗವು ಗಣಕೀಕೃತ ಟಿಕೆಟ್ ಕಾಯ್ದಿರಿಸುವ ಕೇಂದ್ರ, ಜನ್ ಸಾಧಾರಣ ಬುಕಿಂಗ್ ಸೇವಕ್, ಇಂಡಿಯನ್ ಪೋಸ್ಟ್ ಪಿಆರ್‌ಎಸ್ ಸೆಂಟರ್, ಉಪಹಾರ ಗೃಹಗಳು, ಎಲ್‌ಇಡಿ ಬೋರ್ಡ್‌ಗಳು, ಹೆಚ್ಚುವರಿ ಟಿಕೆಟ್ ನೀಡುವ ಕೇಂದ್ರಗಳನ್ನು ತೆರೆಯಲಾಗಿದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಉತ್ತಮವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಬ್‌ವೇ ನಿರ್ಮಾಣ: ಮೈಸೂರು ರೇಲ್ವೆ ನಿಲ್ದಾಣದಲ್ಲಿ ಎಲ್ಲಾ ಪ್ಲಾಟ್‌ಫಾರಂಗಳನ್ನು ಸಂಪರ್ಕಿಸುವ ಸಬ್ ನಿರ್ಮಾಣ ಕಾರ್ಯವನ್ನು ಕೂಡಲೆ ಕೈಗೆತ್ತಿಕೊಳ್ಳಲಾಗುವುದು. ಈಗಾಗಲೆ 4.62 ಕೋಟಿ ವೆಚ್ಚದಲ್ಲಿ ರೇಲ್ವೆ ವಸ್ತು ಸಂಗ್ರಹಾಲಯವನ್ನು ಪ್ರವಾಸಿ ಕೇಂದ್ರವಾಗಿ ರೂಪಿಸಲಾಗಿದೆ. ಬೋಗಿಗಳಲ್ಲಿ ಸ್ವಚ್ಛತೆ ಕಾಪಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ರೇಲ್ವೆ ಇಲಾಖೆಯ ನೌಕರರು ಮತ್ತು ಅವರ ಕುಟುಂಬ ವರ್ಗದವರ ಕಲ್ಯಾಣಕ್ಕೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದೆಯೂ ನೌಕರರು ಗುಣಮಟ್ಟ, ಉತ್ಸಾಹದಿಂದ ಕೆಲಸ ಮಾಡಿದರೆ ಯಶಸ್ಸು ನಮ್ಮದಾಗುತ್ತದೆ ಎಂದರು. ಇದೆ ವೇಳೆ ಉತ್ತಮ ರೇಲ್ವೆ ನಿಲ್ದಾಣ ಪ್ರಶಸ್ತಿಯನ್ನು ಶಿವಮೊಗ್ಗ ಟೌನ್ ರೇಲ್ವೆ ನಿಲ್ದಾಣಕ್ಕೆ ನೀಡಲಾಯಿತು. ಉತ್ತಮ ವಿಭಾಗ ನಿರ್ವಹಣ ಪ್ರಶಸ್ತಿಯನ್ನು ಎಲೆಕ್ಟ್ರಿಕಲ್ ವಿಭಾಗವು, ಉತ್ತಮ ಕಚೇರಿ ನಿರ್ವಹಣೆ ಪ್ರಶಸ್ತಿಯನ್ನು ಮೆಕ್ಯಾನಿಕಲ್ ವಿಭಾಗವು ಪಡೆದರೆ, ಉತ್ತಮ ವಿಶ್ರಾಂತಿ ಕೊಠಡಿ ಪ್ರಶಸ್ತಿಗೆ ಅರಸೀಕೆರೆ ನಿಲ್ದಾಣ ಪಡೆದುಕೊಂಡಿತು. ಹೆಚ್ಚುವರಿ ವಿಭಾಗೀಯ ರೇಲ್ವೆ ವ್ಯವಸ್ಥಾಪಕ ರಾಜಾಮುರುಗನ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಡಿಪಿಒ ಎಸ್. ಶ್ರೀನಿವಾಸರಾಘವನ್ ಇದ್ದರು.