ಜಾಗತೀಕರಣದ ನಡುವೆ ಜನಪದ ಮರೆ
ಕ.ಪ್ರ.ವಾರ್ತೆ ಹುಣಸೂರು ಏ. 26
ಜಾಗತೀಕರಣದಿಂದ ನಾಡು, ನುಡಿ, ಸಾಂಸ್ಕೃತಿಕ ನೆಲೆಗಟ್ಟು ಕೊಚ್ಚಿ ಹೋಗಿ ನಾವು ಜನಪದ ಮರೆಯುತ್ತಿದ್ದೇವೆ ಎಂದು ಉಪನ್ಯಾಸಕ ಬೆಸೂರು ಮೋಹನ ಪಾಳೇಗರ್ ವಿಷಾದಿಸಿದರು.
ಪಟ್ಟಣದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಎನ್‌ಎಸ್‌ಎಸ್ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವದಲ್ಲೆ 3600 ಭಾಷೆಗಳು, ಸಾವಿರಾರು ದೇವರು, ಜಾತಿ ಹೊಂದಿರುವ ಭಾರತದಂತ ಮತ್ತೊಂದು ದೇಶ ಇಲ್ಲ. ಆಧ್ಯಾತ್ಮವೆ ದೇಶದ ದೊಡ್ಡ ಶಕ್ತಿ. ನಮ್ಮ ಜನಪದ ಸಂಸ್ಕೃತಿ, ಪರಂಪರೆಗೆ ತನ್ನದೆ ಆದ ಇತಿಹಾಸ ಇದೆ. ಮಾಧ್ಯಮಗಳು ನಮ್ಮ ಸಂಸ್ಕೃತಿ ಪ್ರತಿಬಿಂಬಿಸುವಲ್ಲಿ ವಿಫಲವಾಗಿವೆ ಎಂದರು.
ಪಠ್ಯದೊಂದಿಗೆ ನೈತಿಕ ನೆಲೆಗಟ್ಟಿನ ಬೌದ್ಧಿಕಮಟ್ಟ, ಮಾನವೀಯ ಮೌಲ್ಯಗಳುಳ್ಳ ಸಾಂಸ್ಕೃತಿಕ ನೆಲೆಗಟ್ಟಿನ ಪಠ್ಯಕ್ರಮ ಇಂದಿನ ವಿದ್ಯಾರ್ಥಿಗಳಿಗೆ ಅತ್ಯಗತ್ಯ ಎಂದರು.
ಪ್ರಾಂಶುಪಾಲ ಪ್ರೊ.ಎಚ್.ಸಿ. ಲೋಹಿತಾಶ್ವ ಅವರ ಭಾರತ ಸಂವಿಧಾನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಎಚ್.ಪಿ. ಮಂಜುನಾಥ್, ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭ ವಿದ್ಯಾರ್ಥಿಗಳಿಗೆ ಹಬ್ಬವಿದ್ದಂತೆ. ಈ ಹಬ್ಬದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಸಮಾರಂಭದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ವಿಜೇತರಿಗೆ ಹಾಗೂ ಪ್ರತಿಭಾವಂತರಿಗೆ ಬಹುಮಾನ ವಿತರಿಸಲಾಯಿತು. ಜಿಪಂ ಸದಸ್ಯ ರಮೇಶ್, ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳಾದ ಗೋವಿಂದೇಗೌಡ, ಸುಕನ್ಯಾ, ಪಿ.ಲಕ್ಷ್ಮಿ, ವೇದಿಕೆ ಸಂಚಾಲಕ ವೆಂಕಟೇಶಯ್ಯ, ಎನ್.ಎಸ್.ಎಸ್ ಸಂಚಾಲಕ ಎನ್.ಪಿ. ಮಹೇಶ್, ಕ್ರೀಡಾ ಸಂಚಾಲಕ ಡಾ.ಬಿ.ವಿ. ಗಣೇಶ್ ಇದ್ದರು.