ಪಂಕ್ತಿಭೇದವು ಅನ್ನದಲ್ಲಿ ವಿಷ ಹಾಕಿದಂತೆ
ಕ.ಪ್ರ.ವಾರ್ತೆ ಮೈಸೂರು ಏ. 26
ಪಂಕ್ತಿಭೇದ ಎಂಬುದು ಅನ್ನದಲ್ಲಿ ವಿಷ ಹಾಕಿದಂತೆ. ಧರ್ಮ ಮತ್ತು ಅನ್ನದಲ್ಲಿ ವಿಷ ಬೆರೆಸಬಾರದು ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.
ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಜಿಲ್ಲಾ ಮತ್ತು ಯುವ ಘಟಕವು ಶನಿವಾರ ಆಯೋಜಿಸಿದ್ದ ಅನ್ನದಾನ ಮತ್ತು ಪಂಕ್ತಿಭೇದ- ಒಂದು ಪರಾಮರ್ಶೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಷ್ಟು ದಿನ ದಲಿತರು, ಹಿಂದುಳಿದವರನ್ನು ಪಂಕ್ತಿಯಿಂದ ಹೊರಹಾಕಿದಾಗ ದೊಡ್ಡ ಸಂಗತಿ ಆಗಲಿಲ್ಲ. ಆದರೆ, ಈಗ ದಕ್ಷಿಣ ಕನ್ನಡ ಭಾಗದಲ್ಲಿ ಹೆಚ್ಚಾಗಿರುವ ಬಂಟ ಸಮುದಾಯವರನ್ನು ಹೊರಹಾಕಿದ್ದು ಈಗ ದೊಡ್ಡ ಸಂಗತಿ ಆಗಿದೆ. ಇದರಿಂದಾಗಿಯೇ ಈಗ ಹೋರಾಟ ಜಾಸ್ತಿ ಆಗಿದೆ ಎಂದು ತಿಳಿಸಿದರು.
ಮಠಗಳಿಂದ ಹಿಂದೂ ಧರ್ಮಕ್ಕೆ ಕಳಂಕ ಆಗುತ್ತಿದೆ. ಮಠಗಳು ವೈಚಾರಿಕವಾಗಿ ಶುದ್ಧೀಕರಣ ಆಗಬೇಕಿದೆ. ಒಂದು ವೇಳೆ ಶುದ್ಧೀಕರಣ ಆಗದಿದ್ದರೆ ಸರ್ಕಾರ ಮಠಗಳನ್ನು ಸ್ವಾಧೀನಪಡಿಸಿಕೊಳ್ಳಬೇಕು. ಮಠಗಳು ಸಂಸ್ಕೃತಿಯನ್ನು ಪ್ರತಿಬಿಂಬಿಸಿ, ಮನುಷ್ಯತ್ವ ಎತ್ತಿ ಹಿಡಿಯಬೇಕು. ಆಗ ಮಾತ್ರ ಮಠಗಳಿಂದ ಸಮಾಜ ಉದ್ಧಾರ ಸಾಧ್ಯ ಎಂದರು.
ವಾಲ್ಮೀಕಿ ನಾಯಕ ಜನಾಂಗದವರಲ್ಲ ಬ್ರಾಹ್ಮಣ ಎಂದಿರುವುದು ಜಾತಿಯ ಪ್ರತಿಷ್ಠೆ ತೋರುತ್ತದೆ. ಬಾಬಾ ರಾಮದೇವ್ ಅವರು ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ. ಬೇಕಾದರೆ ಅವರು ಕಾವಿ ಬಿಚ್ಚಿಟ್ಟು ರಾಜಕೀಯ ಮಾಡಲಿ. ಪ್ರಸ್ತುತ ಧರ್ಮ ರಾಜಕೀಯದಲ್ಲಿ ಕೈ ಹಾಕಿದೆ. ಸರ್ಕಾರಗಳು ಧರ್ಮಗಳ ಜೀತದಾಳು ತನದಿಂದ ಮುಕ್ತಿ ಪಡೆಯುವ ಅಗತ್ಯ ಇದೆ ಎಂದು ಹೇಳಿದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕತ್ತಲು ಆವರಿಸಿದೆ, ಮೌಢ್ಯದ ತವರಾಗಿದೆ. ಚಾಮರಾಜನಗರ, ಕೊಳ್ಳೇಗಾಲ ಭಾಗದಲ್ಲಿ ಮಲೆ ಮಹದೇಶ್ವರರು ಮೌಢ್ಯ ಹೋಗಲಾಡಿಸಿ ಬೆಳಕು ತಂದರು. ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಬೆಳಕು ತರಲು ಮಹದೇಶ್ವರಂತವರು ಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯು ಸಾಕ್ಷರತೆಯಲ್ಲಿ ಮುಂದಿದೆ. ರ್ಯಾಂಕ್ ಪಡೆಯುವವರಲ್ಲಿ ಈ ಜಿಲ್ಲೆಯವರು ಹೆಚ್ಚಾಗಿದ್ದಾರೆ. ಬರೀ ಅಕ್ಷರ ಅಭ್ಯಾಸ ಮಾಡಿಸಿದರೆ ಸಾಲದು. ಕರ್ಮಟ ಓಡಿಸುವ ವೈಚಾರಿಕ ಶಿಕ್ಷಣ ಬೇಕು. ದಕ್ಷಿಣ ಕನ್ನಡ ಮೊದಲು ವೈಚಾರಿಕ ಜಿಲ್ಲೆ ಆಗಿತ್ತು. ಸಾಹಿತಿ ಶಿವರಾಮ ಕಾರಂತರು ವೈಚಾರಿಕವಾಗಿ ಮಾತನಾಡುತ್ತಿದ್ದರು ಎಂದರು.
ಎಲ್ಲ ಬ್ರಾಹ್ಮಣರು ಕೆಟ್ಟವರಲ್ಲ. ಬ್ರಾಹ್ಮಣ ಸಮುದಾಯದಲ್ಲಿ ಬಹುಸಂಖ್ಯೆಯಲ್ಲಿ ಒಳ್ಳೆಯ ಮನುಷ್ಯರಿದ್ದಾರೆ. ಕೆಲವರು ಮಾತ್ರ ತಾರತಮ್ಯದಲ್ಲಿ ತೊಡಗಿದ್ದಾರೆ. ಪಂಕ್ತಿಭೇದದಂತಹ ಘಟನೆಗಳು ಆದಾಗ ಪೇಜಾವರ ಶ್ರೀಗಳು ಆಗಬಾರದಿತ್ತು, ಆಗೋಗಿದೆ ಎನ್ನುತ್ತಾರೆ. ಅವುಗಳ ಮೂಲ ಬೇರು ತೆಗೆದು ಹಾಕುವಂತಹ ಕೆಲಸವನ್ನು ಶ್ರೀಗಳು ಮಾಡಬೇಕು. ಸ್ವಾಮೀಜಿಗೆ ಬದಲಾವಣೆ ತರುವ ಮನಸಿದೆ. ಆದರೆ, ವ್ಯವಸ್ಥೆ ಅವರನ್ನು ಮಾಡಲು ಬಿಡುತ್ತಿಲ್ಲ ಎಂದು ತಿಳಿಸಿದರು.
ಬಂಟರ ಹಣ ಬೇಕು: ಸಾಹಿತಿ ಹಂತರಾಡಿ ಅಮೃತಶೆಟ್ಟಿ ಮಾತನಾಡಿ, ತುಳು ನಾಡಿಗರಲ್ಲಿ ಮಠದ ಸಂಸ್ಕೃತಿ ಇಲ್ಲ, ಮಠಕ್ಕೂ ನಮಗೂ ಸಂಬಂಧವಿಲ್ಲ. ನಾವು ದೈವ ಆರಾಧನೆ ಮಾಡುತ್ತೇವೆ, ದೇವರ ಆರಾಧನೆ ಮಾಡುವುದಿಲ್ಲ. ಶೈಕ್ಷಣಿಕ ಪ್ರಗತಿ ಆದರೂ ಮಾನಸಿಕ ಗುಲಾಮತನ ಬೆಳೆದಿದೆ. ಪಂಕ್ತಿಭೇದದಲ್ಲಿ ಅವಮಾನಗೊಂಡ ಡಾ. ವನಿತಾ ಶೆಟ್ಟಿ ನನ್ನ ಸಹೋದರಿ. ದೇವಸ್ಥಾನ, ಮಠಗಳಿಗೆ ಬಂಟರ ಹಣ ಹರಿದು ಬರುತ್ತಿದೆ. ಆದರೆ, ಬಂಟರ ಸಮುದಾಯದವರಿಗೆ ಪಂಕ್ತಿಯಲ್ಲಿ ಊಟ ಹಾಕುವುದಿಲ್ಲ. ನಮ್ಮಲ್ಲಿರುವ ಮಾನಸಿಕ ಗುಲಾಮತನ ಹೋಗಬೇಕಿದೆ ಎಂದು ಅವರು ಹೇಳಿದರು.
ರಂಗಾಯಣ ನಿರ್ದೇಶಕ ಹಾಗೂ ಜಾನಪದ ಗಾಯಕ ಜನಾರ್ದನ್ (ಜನ್ನಿ) ಮಾತನಾಡಿ, ಅಕ್ಷರವಂತರು, ಪ್ರಗತಿಪರರ ಇದ್ದರೂ ಅನಿಷ್ಟ ಪದ್ಧತಿ ಜೀವಂತವಾಗಿದೆ. ಇದು ಜಾತಿವಾದಿಗಳ ಹುನ್ನಾರ. ನಮ್ಮಲ್ಲಿ ಪಂಕ್ತಿಭಾವ ಇದೆ, ಭೇದ ಇಲ್ಲ. ಭೇದಭಾವ ಮಾಡುವ ಕಡೆ ಜನ ಹೋಗಬಾರದು. ಅಲ್ಲಿಗೆ ಹೋದರೆ ಪರೋಕ್ಷವಾಗಿ ಬೆಂಬಲಿಸಿದಂತೆ ಆಗುತ್ತದೆ. ಅಂತಹ ಕಡೆ ಜನ ಹೋಗದೇ ಭೇದ ಮಾಡುವವರನ್ನು ಅನಾಥ ಆಗಿಸಬೇಕು ಎಂದು ಸಲಹೆ ನೀಡಿದರು.
ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ಪ್ರಾಸ್ತಾವಿಕವಾಗಿ ಮಾತನಾಡಿದರು. ದಸಂಸ ಜಿಲ್ಲಾ ಸಂಚಾಲಕ ದೇವಗಳ್ಳಿ ಸೋಮಶೇಖರ್, ಕಸಾಪ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್, ಗೌರವ ಕಾರ್ಯದರ್ಶಿ ಡಾ.ವೈ.ಡಿ.ರಾಜಣ್ಣ, ವೇದಿಕೆಯ ಜಿಲ್ಲಾಧ್ಯಕ್ಷ ಸಿ.ನಾಗಣ್ಣ, ನಗರಾಧ್ಯಕ್ಷ ಚಂದ್ರು, ಯುವ ಘಟಕದ ಜಿಲ್ಲಾಧ್ಯಕ್ಷ ಎಚ್.ಬೀರಪ್ಪ ಇದ್ದರು.