ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಾಲೆ ಬಿಟ್ಟವರಿಗೆ ಬಂತು ಚಿಣ್ಣರ ಅಂಗಳ

Mainashree
Updated On : 27 Apr 2014, 12:08 pm

ಕ.ಪ್ರ.ವಾರ್ತೆ  ಮೈಸೂರು  ಏ. 26
ನಾನಾ ಕಾರಣಗಳಿಂದ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಮುಂದಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ಚಿಣ್ಣರ ಅಂಗಳ ತರಗತಿ ಆರಂಭಿಸಿದೆ.
ಮೈಸೂರು ಜಿಲ್ಲಾದ್ಯಂತ ಈ ಹಿಂದೆ ನಡೆಸಿದ ಮಕ್ಕಳ ಸಮೀಕ್ಷೆ 2013ರ ಪ್ರಕಾರ ಒಟ್ಟು 5921 ಮಕ್ಕಳು ಶಾಲೆ ಬಿಟ್ಟಿದ್ದಾರೆ. ಅವರಲ್ಲಿ 3220 ಗಂಡು ಮಕ್ಕಳು ಹಾಗೂ 2701 ಹೆಣ್ಣು ಮಕ್ಕಳಿದ್ದಾರೆ. ಇವರಲ್ಲಿ 1266 ಮಕ್ಕಳನ್ನು ಚಿಣ್ಣರ ಅಂಗಳಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಉಳಿದವರಿಗೆ ಅವರು ವಾಸಿಸುವ ಶಾಲೆಗಳಲ್ಲಿಯೇ ಬೆಳಗ್ಗೆ ತರಗತಿ ಆರಂಭವಾಗುವ ಒಂದು ಗಂಟೆ ಮುಂಚೆ ಹಾಗೂ ಸಂಜೆ ತರಗತಿ ಮುಗಿದ ನಂತರ ಒಂದು ಗಂಟೆ ಕಾಲ ಪಾಠ ಬೋಧಿಸಲಾಗುತ್ತದೆ.
ಏನಿದು ಚಿಣ್ಣರ ಅಂಗಳ?: ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬರಿಗೂ ಶಿಕ್ಷಣ ಸೌಲಭ್ಯ ಲಭಿಸಬೇಕೆಂಬುದು ರಾಜ್ಯಾಂಗದಲ್ಲಿ ಅಡಕವಾಗಿದೆ. ಅದೇ ರೀತಿ ಸರ್ಕಾರ ಪ್ರತಿ ವರ್ಷ ಹಲವು ಯೋಜನೆಗಳನ್ನು ಪ್ರಕಟಿಸುವ ಮೂಲಕ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗುತ್ತಿದೆ. ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಕಿತ್ತು ತಿನ್ನುತ್ತಿರುವ ಬಡತನ, ಆತ್ಮವಿಶ್ವಾಸದ ಕೊರತೆ, ಕೌಟುಂಬಿಕ ಹಿನ್ನೆಲೆಯಿಂದ ಕೆಲವು ಮಕ್ಕಳು ಶಾಲೆಗೆ ಸೇರಿರುವುದಿಲ್ಲ. ಇನ್ನು ಕೆಲವರು ಓದುತ್ತಿರುವಾಗಲೆ ಶಾಲೆ ಬಿಟ್ಟಿರುತ್ತಾರೆ. ಇಂತವರನ್ನು ಹುಡುಕಿ ಮತ್ತೆ ಶಾಲೆಗೆ ಕರೆತಂದು ಅವರಿಗೆ ಪೂರ್ವ ತರಗತಿ ನಡೆಸಲಾಗುತ್ತದೆ. ಅದಕ್ಕಾಗಿಯೇ ಚಿಣ್ಣರ ಅಂಗಳ ಎಂಬ ಶೀರ್ಷಿಕೆಯಡಿ ಏ.22 ರಿಂದ ಜು. 22 ರವರೆಗೆ ವಿಶೇಷ ತರಗತಿ ನಡೆಸಲಾಗುತ್ತದೆ.
ಮೈಸೂರು ನಗರ (ಉತ್ತರ) (ದಕ್ಷಿಣ) (ಗ್ರಾಮಾಂತರ), ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು, ಟಿ.ನರಸೀಪುರ ಹಾಗೂ ಕೆ.ಆರ್.ನಗರ ತಾಲೂಕುಗಳಲ್ಲಿ ಕೆಲವು ಶಾಲೆಗಳನ್ನು ಗುರುತಿಸಲಾಗುತ್ತದೆ. ಅಲ್ಲಿಗೆ ಶಾಲೆ ಬಿಟ್ಟ ಮಕ್ಕಳನ್ನು ದಾಖಲಿಸಿ ಅವರಿಗೆ ಸ್ಥಳೀಯವಾಗಿ ಡಿ.ಇಡಿ, ಬಿ.ಇಡಿ ಪದವಿ ಪಡೆದ ಅಭ್ಯರ್ಥಿಗಳಿಂದ ಶಿಕ್ಷಣ ಕೊಡಿಸಲಾಗುತ್ತದೆ. ಸರ್ಕಾರ ಪ್ರತಿ ಮಗುವಿಗೆ 487 ವ್ಯಯಿಸುತ್ತದೆ. ಇದರಲ್ಲಿ ಪ್ರತಿ ಮಗುವಿನ ಪರವಾಗಿ ಶಿಕ್ಷಕರಿಗೆ 360, ಎಸ್‌ಡಿಸಿಎಂಸಿಗೆ 117 ಹಾಗೂ ಸಾರಿಗೆ ವ್ಯವಸ್ಥೆಗೆ 10 ನೀಡಲಾಗುತ್ತದೆ. ಈ ಮೊತ್ತವನ್ನು ಮೂರು ತಿಂಗಳಿಗೆ ಸೇರಿಸಿ ಕೊಡಲಾಗುತ್ತದೆ.
ಉಳಿದವರಿಗೆ ಏನೇನು ವ್ಯವಸ್ಥೆ?: ಚಿಣ್ಣರ ಅಂಗಳಕ್ಕೆ ಬರುವ ಮಕ್ಕಳನ್ನು ಹೊರತುಪಡಿಸಿ 216 ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಗೃಹಾಧಾರಿತ ಶಿಕ್ಷಣ ಮತ್ತು ಶಾಲಾ ಸಿದ್ಧತಾ ಕಾರ್ಯಕ್ರಮದಡಿ ಮುಖ್ಯವಾಹಿನಿಗೆ ತರಲಾಗುತ್ತದೆ. 101 ಮಕ್ಕಳಿಗೆ 12 ತಿಂಗಳ ವಸತಿ ಸಹಿತ ವಿಶೇಷ ತರಬೇತಿ, 270 ಮಕ್ಕಳಿಗೆ 12 ತಿಂಗಳ ಚಿಣ್ಣರ ತಂಗುಧಾಮ ವಸತಿ ಸಹಿತ ವಿಶೇಷ ತರಬೇತಿ, 53 ಮಕ್ಕಳಿಗೆ ಟೆಂಟ್ ಶಾಲೆ, 3260 ಮಕ್ಕಳಿಗೆ ಶಾಲಾಧಾರಿತ ತರಬೇತಿ, 455 ಮಕ್ಕಳಿಗೆ ಹಾಸ್ಟೆಲ್ ಮೂಲಕ ಮುಖ್ಯವಾಹಿನಿಗೆ ತರಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಡಿಡಿಪಿಐ ಎಚ್.ಆರ್. ಬಸಪ್ಪ ಕನ್ನಡಪ್ರಭಕ್ಕೆ ತಿಳಿಸಿದರು.
- ಶಾಲಾ ಸೌಲಭ್ಯದ ಕೊರತೆ
- ಮನೆಗೆಲಸ ಹಾಗೂ ಇತರರ ಮನೆಗಳಲ್ಲಿ ಕೆಲಸ ಮಾಡುವುದು
- ಹೆಣ್ಣು ಮಕ್ಕಳು ಮದುವೆಯಾಗಿರುವುದು, ಪ್ರೌಢಾವಸ್ಥೆ ಹಾಗೂ ಇತರೆ ಕಾರಣ
- ಶಿಕ್ಷಕರ ಭಯ, ಶಾಲಾ ವಾತಾವರಣ, ಮಕ್ಕಳು ಓಡಿ ಹೋಗಿರುವುದು
- ಬೀದಿ ಮಕ್ಕಳು ಹಾಗೂ ವಿಶೇಷ ಅಗತ್ಯವುಳ್ಳ ಮಕ್ಕಳು ಶಾಲೆಗೆ ಸೇರದಿರುವುದು

  ಜೆ. ಮಹದೇವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement