ಸಮಾನತೆಗೆ ಹೋರಾಡಿದ ಅಂಬೇಡ್ಕರ್
ಕ.ಪ್ರ.ವಾರ್ತೆ ಬೈಲುಕುಪ್ಪೆ ಏ. 26
ಸಮಾನತೆಗಾಗಿ ಪ್ರಥಮವಾಗಿ ಹೋರಾಟ ನಡೆಸಿದ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್ ಆಗಿದ್ದಾರೆಂದು ಮಾನಸ ಗಂಗೋತ್ರಿಯ ಅಂಬೇಡ್ಕರ್ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎಸ್.ನರೇಂದ್ರಕುಮಾರ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ನವಿಲೂರು ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ವತಿಯಿಂದ 123ನೇ ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಮೈಸೂರು ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಬಿ.ಜೆ. ವಿಜಯ್ಕುಮಾರ್ ಮಾತನಾಡಿ, ಅಂಬೇಡ್ಕರ್ ಅವರು ಸುಭದ್ರ ಸರ್ಕಾರ ಹಾಗೂ ಸಮಗ್ರ ಭಾರತ ರಚಿಸುವ ಗುರಿ ಹೊಂದಿದ್ದರು. ಆದ್ದರಿಂದ ಸಮಾಜದಲ್ಲಿ ಜಾತ್ಯತೀತ ಪರಿಕಲ್ಪನೆ ಮೂಲಕ ಮಾತ್ರ ಉತ್ತಮ ಆಡಳಿತ ಇರಲು ಸಾಧ್ಯವೆಂದು ನಂಬಿದ್ದರು. ಈ ಕಾರಣಕ್ಕಾಗಿ ಪತ್ರಿಕಾ ಸ್ವಾತಂತ್ರ್ಯ, ಆರ್ಥಿಕ ಭದ್ರತೆ, ಮಹಿಳಾ ಸಬಲೀಕರಣ, ಶಿಕ್ಷಣದ ಜಾಗೃತಿಯನ್ನು ಹೊಂದಬೇಕು ಎಂದು ಹೇಳಿದರು.
ಮಾಜಿ ಶಾಸಕ ಎಚ್.ಸಿ. ಬಸವರಾಜ್ ಮಾತನಾಡಿ, ದೇಶದ ಪ್ರತಿಯೊಬ್ಬರಿಗೂ ಅನುಕೂಲವಾಗುವಂತಹ ಸಂವಿಧಾನ ನೀಡುವಲ್ಲಿ ಅಂಬೇಡ್ಕರ್ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಉತ್ತಮ ವ್ಯಾಸಂಗ ಮಾಡಿ, ಹೆಚ್ಚು ಅಂಕ ಪಡೆದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಡಾ.ಬಿ.ಆರ್. ಅಂಬೇಡ್ಕರ್ ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ವಿತರಿಸಿದರು.
ಗ್ರಾಪಂ ಅಧ್ಯಕ್ಷ ರವಿಮಾನು, ತಾಪಂ ಸದಸ್ಯ ಮಹದೇವ್, ತಾಪಂ ಮಾಜಿ ಅಧ್ಯಕ್ಷ ರಾಮು, ಗ್ರಾಪಂ ರಾಜು, ಸದಸ್ಯರಾದ ರಾಜು, ಜೆ.ಕಮಲ, ತಾಲೂಕು ಜೆಡಿಎಸ್ ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಚನ್ನಪ್ಪ, ಸಂಘದ ಅಧ್ಯಕ್ಷ ರಾಚಯ್ಯ, ಎಂ.ಕೆ. ಸೋಮು, ಎಂ.ಎಂ. ರವಿ, ದೇವರಾಜ್, ಹರೀಶ್, ಮಧುಕುಮಾರ್, ರಜನಿಕಾಂತ್, ಅಶೋಕ್, ಪ್ರಕಾಶ್ ಕೊಪ್ಪ, ಎನ್.ಸಿ. ಹರೀಶ್, ಗ್ರಾಮಸ್ಥರು, ಯಜಮಾನರು ಭಾಗವಹಿಸಿದ್ದರು.