ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಪೌಷ್ಟಿಕತೆಗೆ ಸ್ವಿರುಲಿನಾ ದಿವ್ಯ ಔಷಧ

Mainashree
Updated On : 27 Apr 2014, 11:13 am

ಕ.ಪ್ರ.ವಾರ್ತೆ  ಮೈಸೂರು  ಏ. 27
ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ನಾನಾ ಕಾರ್ಯಕ್ರಮ ಕೈಗೊಂಡಿದೆ. ಅಂಗನವಾಡಿ ಕೇಂದ್ರಗಳಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ಪದಾರ್ಥ, ಪೌಷ್ಟಿಕ ಮಾತ್ರೆಗಳನ್ನು ವಿತರಿಸಲಾಗುತ್ತಿದೆ. ಶಾಲೆಗಳಲ್ಲಿ ಬಿಸಿಯೂಟ, ಕ್ಷೀರಭಾಗ್ಯ ಇವುಗಳ ಮುಂದುವರಿದ ಭಾಗ. ಆದರೂ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. ಇದನ್ನು ಹೋಗಲಾಡಿಸಲು ಸ್ವಿರುಲಿನಾ ಮಾತ್ರೆ ದಿವ್ಯ ಔಷಧದಂತೆ ಕೆಲಸ ಮಾಡುತ್ತಿದೆ.
ನಿಸರ್ಗ ಫೌಂಡೇಷನ್ ಸಂಸ್ಥೆಯು ಎಚ್.ಡಿ. ಕೋಟೆ ತಾಲೂಕಿನ ಕೆಲವು ಹಾಡಿಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳನ್ನು ಗುರುತಿಸಿ, ಸ್ವಿರುಲಿನಾ ಮಾತ್ರೆಗಳನ್ನು ನೀಡುವ ಮುಖಾಂತರ ಪೌಷ್ಟಿಕತೆಯೆಡೆಗೆ ತರುವಲ್ಲಿ ಕಳೆದ ಒಂದು ವರ್ಷದಿಂದ ಮಾಡಿದ ಪ್ರಯೋಗ ಸ್ವಾರ್ಥಕತೆಯೆಡೆಗೆ ಸಾಗಿದೆ. ಕಾಂತನಹಾಡಿ, ಕೆರೆಹಾಡಿ, ಆನಗಟ್ಟಿ, ಕೆ.ಜಿ.ಹಳ್ಳಿ, ಕುಂಟೇರಿ ಹಾಡಿ, ಭೀಮನಹಳ್ಳಿ ಹಾಡಿ, ರಾಜೇಗೌಡನಹುಂಡಿ, ಪ್ರಭಾನಗರ, ಬಿ.ಆರ್.ಕಟ್ಟೆ ಹಾಡಿಗಳಲ್ಲಿ ಕಳೆದ ಒಂದು ವರ್ಷದಿಂದ 150ಕ್ಕಿಂತ ಹೆಚ್ಚು ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಸ್ವಿರುಲಿನಾ ಮಾತ್ರೆಗಳನ್ನು ನೀಡುವುದು, ಜೊತೆಗೆ ಪೌಷ್ಟಿಕ ಆಹಾರ ನೀಡುವುದು, ಆರೋಗ್ಯ ಶಿಕ್ಷಣ ನೀಡುವುದರ ಮುಖಾಂತರ ಕಾರ್ಯಕ್ರಮ ಯಶಸ್ವಿಯಾಗಿದೆ. ಮೈಸೂರಿನ ವೈದ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ.ಜೆರಿ ಪಾಯಸ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಅನುಷ್ಠಾನವಾಗುತ್ತಿದೆ.
ಕನ್ಯಾಕುಮಾರಿ ಮಾತ್ರೆಗಳು: ಸ್ವಿರುಲಿನಾ ಮಾತ್ರೆಗಳನ್ನು ಕನ್ಯಾಕುಮಾರಿ ಓಲೆಸ್ಟಿಕ್ ನ್ಯಾಚೋರೋಪತಿ ಹೆಲ್ತ್ ಸೆಂಟರ್‌ನಿಂದ ತರಿಸಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ನಿಸರ್ಗ ಫೌಂಡೇಷನ್ ಸಂಸ್ಧೆಯ ಕಾರ್ಯಕರ್ತೆ ದಿಳ್‌ಶಾದ್ ನಿರ್ವಹಿಸುತ್ತಿದ್ದಾರೆ. ಈಗಲೂ ಈ ಕಾರ್ಯಕ್ರಮದ ಪ್ರಯೋಜನವನ್ನು ಪ್ರಭಾನಗರ ಹಾಡಿ- 9, ಬಿ.ಆರ್. ಕಟ್ಟೆ ಹಾಡಿ - 6, ರಾಜೇಗೌಡನಹುಂಡಿ ಹಾಡಿ -4, ಕುಂಟೇರಿ ಹಾಡಿ -10, ಭೀಮನಹಳ್ಳಿ ಹಾಡಿ -3, ಮಜ್ಜನಕುಪ್ಪೆ -2, ಕೆರೆಹಾಡಿ -16 ಮಂದಿ ಪಡೆಯುತ್ತಿದ್ದಾರೆ. ಈ ಪ್ರಯೋಗವು ಉತ್ತಮ ಫಲಿತಾಂಶ ನೀಡುತ್ತಿರುವುದರಿಂದ ತಾಲೂಕಿನ ಎಲ್ಲಾ ಹಾಡಿಗಳಲ್ಲೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಕಾರ್ಯಕ್ರಮ ವಿಸ್ತರಿಸಬೇಕು ಎಂಬುದು ನಿಸರ್ಗ ಫೌಂಡೇಷನ್ ಸಂಸ್ಥೆಯ ನಿರ್ದೇಶಕ ನಂಜುಂಡಯ್ಯ ಅವರ ಮನವಿ. ಸರ್ಕಾರ ಈ ಬಗ್ಗೆ ಮನಸ್ಸು ಮಾಡಿದರೆ ಆದಿವಾಸಿ ಮಕ್ಕಳು ಮತ್ತು ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುವುದು ತಪ್ಪಲಿದೆ ಎಂಬುದು ಅವರ ಅನಿಸಿಕೆ.

 ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement