ಆಯುರ್ವೇದ ವೈದ್ಯ ಪದ್ಧತಿ ಬಳಕೆಯಾಗಲಿ
ಕ.ಪ್ರ.ವಾರ್ತೆ ಮೈಸೂರು ಏ. 27
ಆಯುರ್ವೇದ ವೈದ್ಯಕೀಯ ಪದ್ಧತಿ ಹೆಚ್ಚಾಗಿ ಬಳಕೆಯಾಗಲಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಹೇಳಿದರು.
ಶಾರದಾ ಮಹಿಳಾ ಕ್ಷೇಮಾಭಿವೃದ್ಧಿ ಸಂಘ, ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಆರೋಗ್ಯ ಭಾರತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಶಾರದಾದೇವಿನಗರದ ಇಂದಿರಾ ಪ್ರೌಢಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಬೃಹತ್ ಆರೋಗ್ಯ ಉಚಿತ ತಪಾಸಣೆ ಶಿಬಿರ ಹಾಗೂ ಔಷಧ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಪ್ರಾಚೀನ ಪದ್ಧತಿಯಾಗಿರುವ ಆಯುರ್ವೇದ ವೈದ್ಯಕೀಯ ಚಿಕಿತ್ಸಾ ಕ್ರಮವು ತುಂಬ ಮಹತ್ವವಾದುದು. ಗುಣಪಡಿಸುವಲ್ಲಿ ನಿಧಾನವಾದರೂ ಇದರಿಂದ ಕಾಯಂ ಪರಿಹಾರ ಸಾಧ್ಯ. ಆದರೆ ಆಧುನಿಕತೆ ಬಂದ ಮೇಲೆ ಇದರ ಬಳಕೆ ಕಡಿಮೆಯಾಗುತ್ತಿದೆ. ಇಂತಹ ದೇಸೀಯ ಪದ್ಧತಿಯ ಅನುಕೂಲಗಳನ್ನು ಅರಿತು, ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರ ಪಾಲಿಕೆ ಸದಸ್ಯ ಜೆ.ಎಸ್. ಜಗದೀಶ್, ಶಾರದಾ ಮಹಿಳಾ ಸಂಘವು ಜೆಎಸ್ಎಸ್ ಸಂಸ್ಥೆಯ ಜತೆಗೂಡಿ ಇಂತಹ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿರುವುದು ಬಡವರಿಗೆ ತುಂಬ ಉಪಯುಕ್ತವಾಗಿದೆ. ಇದರ ಜತೆಗೆ ಉಚಿತವಾಗಿ ಔಷಧ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಟಿ ಪುಟ್ಟಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯ ಆಧೀಕ್ಷಕ ಡಾ.ಗುರು ಬಸವರಾಜು, ಡಾ. ಚಂದ್ರು, ಡಾ. ಸದಾನಂದ್, ಮಹಿಳಾ ಸಂಘದ ಅಧ್ಯಕ್ಷೆ ಸುವರ್ಣ ಬಸವರಾಜು, ಉಪಾಧ್ಯಕ್ಷೆ ದಿವ್ಯಾ ಜಗದೀಶ್, ಕಾರ್ಯದರ್ಶಿ ಶೈಲಾ ಮುಂತಾದವರು ಇದ್ದರು.
ಶಿಬಿರದಲ್ಲಿ ಅಸ್ತಮಾ, ಸಂಧಿವಾತ, ಚರ್ಮರೋಗ, ಸ್ತ್ರೀರೋಗ, ಮೂಲವ್ಯಾಧಿ, ಕಿವಿ, ಮೂಗು, ಗಂಟಲು ಮುಂತಾದ ಇತರೆ ಆರೋಗ್ಯ ಸಮಸ್ಯೆಗಳಿಗೆ ತಪಾಸಣೆ ನಡೆಸಲಾಯಿತು. 10 ಕ್ಕೂ ಹೆಚ್ಚಿನ ವೈದ್ಯರು ಭಾಗವಹಿಸಿದ್ದರು. ಜನತಾನಗರ, ವಸಂತನಗರ, ಶಾರದಾದೇವಿ ನಗರ, ಸಿಎಫ್ಟಿಆರ್ಐ ಕಾಲೋನಿ, ನಿವೇದಿತಾನಗರ ಮುಪಂತಾದ ಬಡಾವಣೆಯ ಸುಮಾರು ಸಾವಿರಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದುಕೊಂಡರು.