ನಿವೃತ್ತಿ ನಂತರ ಕಡ್ಡಾಯ ಪಿಂಚಣಿ ಅರ್ಜಿ ಸಲ್ಲಿಸಿ: ಎಸ್.ಜಿ. ಒಂಬತ್ಕೆರೆ
ಕ.ಪ್ರ.ವಾರ್ತೆ ಮೈಸೂರು ಏ. 27
ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದವರು ಹಲವರು ಪಿಂಚಣಿ ಪಡೆಯುತ್ತಿಲ್ಲ. ನಿವೃತ್ತಿಯಾದ ನಂತರ ಪಿಂಚಣಿ ಪಡೆಯುವುದು ನಮ್ಮ ಹಕ್ಕು. ಹೀಗಾಗಿ ನಿವೃತ್ತರಾವದವರು ಕಡ್ಡಾಯವಾಗಿ ಪಿಂಚಣಿಗಾಗಿ ಅರ್ಜಿ ಸಲ್ಲಿಸುವಂತೆ ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬತ್ಕೆರೆ ಹೇಳಿದರು.
ನಗರದ ಏರ್‌ಫೋರ್ಸ್ ಸೆಲೆಕ್ಷನ್ ಬೋರ್ಡ್‌ನಲ್ಲಿ ಭಾನುವಾರ ನಡೆದ ಮಾಜಿ ಸೈನಿಕರ ಸಂವಾದ ಸಭೆ, ಮಾಜಿ ಸೈನಿಕರ ವಂತಿಗೆ ಆರೋಗ್ಯ ಯೋಜನೆ ಸದಸ್ಯತ್ವ ಅಭಿಯಾನ ಹಾಗೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ವಾಯುಪಡೆಯಲ್ಲಿ ಸೇವೆ ಸಲ್ಲಿಸುವರು 39 ರಿಂದ 42 ವರ್ಷದೊಳಗೆ ನಿವೃತ್ತರಾಗುತ್ತಾರೆ. ನಂತರ ಹಲವರು ಮದುವೆಯಾಗಿ ಜೀವನ ನಡೆಸುತ್ತಿದ್ದಾರೆ. ಇವರಲ್ಲಿ ಹಲವರು ಇಲಾಖೆಗೆ ತಮ್ಮ ವೈವಾಹಿಕ ಸೇರಿದಂತೆ ಇತರೆ ಮಾಹಿತಿ ನೀಡುವುದಿಲ್ಲ. ನಿವೃತ್ತಿಯಾದ ಮೇಲೆ ತಮ್ಮ ಮಾಹಿತಿ ನೀಡುವ ಮೂಲಕ ಸೌಲಭ್ಯ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಭಾರತೀಯ ವಾಯುಪಡೆಯು ಜಾತ್ಯತೀತ, ರಾಜಕೀಯೇತರ ಆಗಿದೆ. ಇಲ್ಲಿ ಯಾರನ್ನು ಧರ್ಮದ ಆಧಾರದ ಮೇಲೆ ಗುರುತಿಸುವುದಿಲ್ಲ. ಎಲ್ಲರನ್ನು ಭಾರತೀಯರು ಎಂದೇ ಗುರುತಿಸಲಾಗುತ್ತದೆ. ಸೇವೆಯಲ್ಲಿ ಮರಣ ಹೊಂದಿದವರು ಉತ್ತಮರು. ಅದೇ ರೀತಿ ಪೂರ್ಣಕಾಲ ದೇಶಕ್ಕಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು ಸಹ ಶ್ರೇಷ್ಠರು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಏರ್ ಕಮಾಂಡೋ ಒ.ಪಿ. ತಿವಾರಿ ಮಾತನಾಡಿ, ಆರು ತಿಂಗಳಿಗೊಮ್ಮೆ ಇಂತಹ ಕಾರ್ಯಕ್ರಮಗಳನ್ನು ಮಾಜಿ ಸೈನಿಕರಿಗಾಗಿ ಆಯೋಜಿಸಲಾಗುವುದು ಎಂದರು.
ಇದೇ ವೇಳೆ ವೀರ ಮರಣ ಹೊಂದಿದ ಹಾಗೂ ನಿಧನರಾದ ಮಾಜಿ ಸೈನಿಕರಿಗೆ ಮೌನಾಚರಣೆ ಮಾಡಲಾಯಿತು. ಬಳಿಕ ಹಿರಿಯ ಸೇನಾನಿಗಳಾದ ಎಚ್.ಆರ್.ಎನ್. ಮೂರ್ತಿ, ಸಿ.ಆರ್. ವಾರ್ಡನ್, ಸೇನಾಮಿತ್ರಾ, ಸೈನಿಕರ ಕುಟುಂಬದವರಾದ ಬಾಲಮಣಿ, ತಂಗಮ್ಮ ಮತ್ತು ಸೊಸಮ್ಮ ಜಕಾರಿಯಾ ಅವರನ್ನು ಸನ್ಮಾನಿಸಲಾಯಿತು.