ಬೆರಗನ್ನು ಅರಿವಿನ ರೂಪಕ್ಕೆ ತಂದ ತೇಜಸ್ವಿ
ಕ.ಪ್ರ.ವಾರ್ತೆ ಮೈಸೂರು ಏ. 27
ಮನಸ್ಸಿನಲ್ಲಿ ಮೂಡಿದ ವಿಶೇಷ ಬೆರಗುಗಳನ್ನು ಅರಿವಿನ ಸ್ವರೂಪ ನೀಡಿ ಲಯ ವಿನ್ಯಾಸದೊಂದಿಗೆ ಸಾಹಿತ್ಯ ಕಟ್ಟಿಕೊಟ್ಟ ದೊಡ್ಡ ವ್ಯಕ್ತಿ ತೇಜಸ್ವಿ ಎಂದು ವಿಮರ್ಶಕ ಪ್ರೊ.ಜಿ.ಎಚ್. ನಾಯಕ ಹೇಳಿದರು.
ಅಭಿಯಂತರರು ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿ ಸಹಯೋಗದೊಂದಿಗೆ ಏರ್ಪಡಿಸಿರುವ ಸಾಂಸ್ಕೃತಿಕ ಲೋಕದಲ್ಲಿ ತೇಜಸ್ವಿ ಒಂದು ಅವಲೋಕನ ಎಂಬ ವಿಚಾರ ಸಂಕಿರಣವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ತೇಜಸ್ವಿ ಅವರ ಸಾಹಿತ್ಯ ಕೃತಿಗಳನ್ನು ವಿಮರ್ಶೆ ಮಾಡಬೇಕೆಂದರೂ ಧೈರ್ಯ ಸಾಲುವುದಿಲ್ಲ. ಎಲ್ಲೊ ಒಂದು ಕಡೆ ಅಳುಕು ತೊಡರಿಸುತ್ತದೆ ಎಂದರು.
ಡಾ.ಶಿವರಾಮ ಕಾರಂತರ ನಂತರ ಎಲ್ಲಾ ಕ್ಷೇತ್ರದ ಬಗ್ಗೆ ಬರೆದವರೆಂದರೆ ತೇಜಸ್ವಿ ಮಾತ್ರ. ಅವರು ತಮ್ಮ ಕೊನೆಯ ಕಾದಂಬರಿಯಾದ ಮಾಯಾಲೋಕದವರೆಗೂ ವಿಸ್ಮಯ ಹಿಡಿದಿಟ್ಟುಕೊಂಡವರು. ಮಾಯಾಲೋಕವನ್ನು ಸರಿಯಾಗಿ ಅರ್ಥೈಸಿಕೊಂಡು ರಂಗರೂಪ ನೀಡಿದ ಸಿ.ಬಸವಲಿಂಗಯ್ಯ ಅವರ ಧೈರ್ಯ ಮೆಚ್ಚಬೇಕು. ನಾನು ಒಂದು ಬಾರಿ ನಾಟಕ ನೋಡಿದ್ದೇನೆ ಎಂದು ತಿಳಿಸಿದರು.
ಅಪ್ಪ - ಮಗ ಒಂದು ಸಮನಾಗಿ ಬೆಳೆದವರಲ್ಲಿ ಕುವೆಂಪು- ಪೂರ್ಣಚಂದ್ರ ತೇಜಸ್ವಿ, ಡಿವಿಜಿ- ಬಿಜಿಎಲ್ ಸ್ವಾಮಿ ಅಗ್ರಗಣ್ಯರು. ದುರಾದೃಷ್ಟವಶಾತ್ ತೇಜಸ್ವಿ, ಬಿಜಿಎಲ್ ಸ್ವಾಮಿ ಹೃದಯಾಘಾತದಿಂದ ಮೃತಪಟ್ಟರು. ಇಬ್ಬರೂ ಉತ್ತಮ ಸಾಹಿತ್ಯ ರಚಿಸಿದ್ದಾರೆ. ತೇಜಸ್ವಿ ಕಳೆದುಕೊಂಡ ಮೇಲೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿಕೊಳ್ಳುವುದು ಕಡಿಮೆಯಾಗಿದೆ ಎನ್ನಬಹುದು ಎಂದು ಅಭಿಪ್ರಾಯಪಟ್ಟರು.
ತೇಜಸ್ವಿ ಕಾರಣ: ಪತ್ರಿಕೋದ್ಯಮಿ ರಾಜಶೇಖರ ಕೋಟಿ ಮಾತನಾಡಿ, ನಾನು ಧಾರವಾಡದಿಂದ ಮೈಸೂರಿಗೆ ಬರಲು ತೇಜಸ್ವಿ ಕಾರಣ. ತೇಜಸ್ವಿ, ಶ್ರೀರಾಮ್, ಪ.ಮಲ್ಲೇಶ್, ಪ್ರೊ.ಕೆ. ರಾಮದಾಸ್ ಅವರು ಧಾರವಾಡಕ್ಕೆ ಬಂದು ಸಮಾಜವಾದದ ಬಗ್ಗೆ ಭಾಷಣ ಮಾಡುತ್ತಿದ್ದರು. ಅವರ ಮಾತುಗಳಿಂದ ಪ್ರೇರಿತನಾದ ನಾನು ಮೈಸೂರಿಗೆ ಬಂದೆ. ಆಂದೋಲನ ಆರಂಭಿಸಿದಾಗ ಹಣಕಾಸು ತೊಂದರೆಯಿಂದ ಸರಿಯಾಗಿ ಪ್ರಕಟವಾಗುತ್ತಿರಲಿಲ್ಲ. ಆಗ ಕರೆದು ಧೈರ್ಯ ತುಂಬಿದವರು, ಮಾರ್ಗದರ್ಶನ ನೀಡಿದವರು ತೇಜಸ್ವಿ. ಒಬ್ಬ ದೊಡ್ಡ ಸಾಹಿತಿಯ ಮಗನಾದರೂ ಕೂಡ ತಂದೆಯ ನೆರಳಿನಲ್ಲಿ ಬೆಳೆಯಲು ಇಚ್ಛೆ ಪಡಲಿಲ್ಲ. ಸ್ವಂತ ಪ್ರತಿಭೆಯಿಂದ ಗುರುತಿಸಿಕೊಂಡರು. ಕಾಫಿ ಬೆಳೆಗಾರರಾಗಿದ್ದ ಅವರು ಗೇಣಿದಾರರ ಪರ ಹೋರಾಟ ಮಾಡಿದವರು ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಡಾ.ಸಿ. ನಾಗಣ್ಣ ಮಾತನಾಡಿ, ತೇಜಸ್ವಿ ಸಾಂಸ್ಕೃತಿಕ ಲೋಕದ ನಾಯಕ. ತಮ್ಮ ವಿಶಿಷ್ಯ ವ್ಯಕ್ತಿತ್ವದ ಮೂಲಕ ಸಮಾಜದ ಬೇರೆ ಬೇರೆ ಕ್ಷೇತ್ರಕ್ಕೆ ತಲುಪಿದರು. ಅಪ್ಪಟ್ಟ ಮನುಷ್ಯ. ತನ್ನ ಅಳಿಯನನ್ನು ಕೂಡ ಬಹಳ ಸರಳವಾಗಿ ಮಾತನಾಡಿಸುತ್ತಿದ್ದ ಅವರ ಕೃತಜ್ಞತೆ ಇಟ್ಟುಕೊಳ್ಳುತ್ತಿರಲಿಲ್ಲ. ಭಾರತೀಯ ಸಂಸ್ಕೃತಿ ಬ್ರಾಹ್ಮಣರ- ವೈದಿಕರ ಸಂಸ್ಕೃತಿ ಎಂದು ಜರಿಯುತ್ತಿದ್ದರು. ವೈದಿಕ ಧರ್ಮವು ಸೃಷ್ಟಿ ವಿರೋಧಿಯಾದದು ಎಂದು ಹೀಗಳೆಯುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ಪರಿಸರ ವಿಜ್ಞಾನಿಯಾಗಿದ್ದರು. ತಂತ್ರಜ್ಞಾನ ಬಳಸುವಲ್ಲಿ ಅತ್ಯಾಧುನಿಕ ಚಿಂತನೆಯುಳ್ಳವರಾಗಿದ್ದರು ಎಂದು ಬಣ್ಣಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ಅಭಿಯಂತರರು ಸಂಸ್ಥೆಯ ಅಧ್ಯಕ್ಷ ಎಚ್.ಎಸ್. ಸುರೇಶ್ಬಾಬು ಇದ್ದರು.