ದಾಳಿ ವೇಳೆ ಸಿಕ್ತು 5 ಲಕ್ಷ ಅನ್ನಭಾಗ್ಯ ಅಕ್ಕಿ
ಕ.ಪ್ರ.ವಾರ್ತೆ ಮೈಸೂರು ಏ. 28
ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ಹಾಗೂ ದಾಸ್ತಾನು ಮಾಡಿದ್ದ ಅನ್ನಭಾಗ್ಯ ಯೋಜನೆಯ 5 ಲಕ್ಷ ಮೌಲ್ಯದ ಅಕ್ಕಿ ಮತ್ತು ಲಾರಿಯನ್ನು ಮೈಸೂರಿನ ಸಿಸಿಬಿ ಪೊಲೀಸರು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.
ಮೈಸೂರಿನ ಶಾಂತಿನಗರ ನಿವಾಸಿ ಅಬ್ದುಲ್ ಕರೀಂ ಎಂಬವರ ಪುತ್ರ ಹಾಗೂ ಲೋಡರ್ ಕೆಲಸ ಮಾಡಿಕೊಂಡಿದ್ದ ಮುಬಾರಕ್ (23) ಬಂಧಿತ ಆರೋಪಿ.
ಸಿಸಿಬಿ ಪೊಲೀಸರಿಗೆ ಭಾನುವಾರ ದೊರೆತ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆಯ ನಿರೀಕ್ಷಕರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ, ಹಳೆ ಕೆಸರೆ ರಸ್ತೆ ಕಡೆಯಿಂದ ಪುಷ್ಪಾಶ್ರಮ ರಸ್ತೆ ಕಡೆಗೆ ಬರುತ್ತಿದ್ದ ಲಾರಿಯನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಸರ್ಕಾರದಿಂದ ಸಾರ್ವಜನಿಕರ ವಿತರಣೆಗಾಗಿ ನೀಡಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಿ ಲಾಭ ಗಳಿಸುವ ಉದ್ದೇಶದಿಂದ 50 ಕೆ.ಜಿ. ಸಾಮರ್ಥ್ಯದ 200 ಅಕ್ಕಿ ಮೂಟೆಗಳು ಪತ್ತೆಯಾಗಿವೆ.
ಅಕ್ಕಿ, ಲಾರಿಯೊಂದಿಗೆ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಳಿಕ ಆರೋಪಿ ನೀಡಿದ ಮಾಹಿತಿ ಮೇರೆಗೆ ಹಳೆ ಕೆಸರೆ ಬಳಿಯ ಕಾಮನಕೆರೆ ಹುಂಡಿ ರಸ್ತೆಯ ಜಂಕ್ಷನ್ನಲ್ಲಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿದ್ದ ಗೋಡೌನ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಗೋಡೌನ್ನಲ್ಲಿದ್ದ 50 ಕೆ.ಜಿ. ಸಾಮರ್ಥ್ಯದ 239 ಚೀಲಗಳಲ್ಲಿ ತುಂಬಿದ್ದ ಅಕ್ಕಿ, ಪಡಿತರ ಅಕ್ಕಿ ತುಂಬಲು ಬಳಸುವ ಖಾಲಿ ಚೀಲಗಳು, ಚೀಲ ಹೊಲೆಯುವ ಯಂತ್ರ, ತೂಕ ಮಾಡುವ ಯಂತ್ರ ಹಾಗೂ ಇತ್ಯಾದಿ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಅಕ್ರಮ ವ್ಯವಹಾರದ ಮೂಲ ರೂವಾರಿ ಮಂಡಿ ಮೊಹಲ್ಲಾದ ಜಾಬೀರ್ ಎಂಬಾತನು ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಒಟ್ಟು 439 ಅಕ್ಕಿ ಚೀಲಗಳು, ಅಕ್ಕಿ ಸಾಗಣೆಗೆ ಬಳಸಲಾದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ, ಡಿಸಿಪಿಗಳಾದ ಕಲಾ ಕೃಷ್ಣಸ್ವಾಮಿ, ಎ.ಎನ್. ರಾಜಣ್ಣ, ಸಿಸಿಬಿ ಘಟಕದ ಎಸಿಪಿ ಕೆ.ಎನ್. ಮಾದಯ್ಯ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ಗಳಾದ ಕೆ.ಎನ್. ಯಶವಂತಕುಮಾರ್, ಎಚ್.ಟಿ. ಸುನಿಲ್ಕುಮಾರ್, ಆರ್.ಜಗದೀಶ್, ಎಸ್ಐ ಶ್ರೀನಿವಾಸಗೌಡ, ಎಎಸ್ಐ ಎಂ.ಡಿ. ಶಿವರಾಜು ಮತ್ತು ಸಿಬ್ಬಂದಿ ಹಿರಣ್ಣಯ್ಯ, ಮಂಜುನಾಥ, ಶ್ರೀನಿವಾಸಪ್ರಸಾದ್, ಗಣೇಶ್, ಎಂ.ಆರ್. ಶಿವರಾಜು, ರಮೇಶ್, ರಾಮಚಂದ್ರು, ಸುನಿಲ್, ಆಹಾರ ಇಲಾಖೆಯ ನಿರೀಕ್ಷಕರಾದ ಕೆ.ಎನ್. ರಾಘವೇಂದ್ರ, ಎಂ. ಪ್ರಭುಲಿಂಗಸ್ವಾಮಿ ಅವರು ಈ ದಾಳಿ ನಡೆಸಿದ್ದಾರೆ.