ಮುಗಿಯದ ನಾಲೆ ಆಧುನೀಕರಣ
ಕ.ಪ್ರ.ವಾರ್ತೆ ಭೇರ್ಯ ಏ. 28
ಬೇಸಿಗೆ ಮುಗಿದರೂ ನಾಲೆಗಳ ಆಧುನೀಕರಣ ಕಾಮಗಾರಿ ಪೂರ್ಣಗೊಳಿಸದೆ ಇರುವ ಹಿನ್ನೆಲೆ ಮೇ 5 ರಂದು ಮೈಸೂರಿನ ಕಾವೇರಿ ನೀರಾವರಿ ನಿಗಮದ ಮುಖ್ಯಕಾರ್ಯನಿರ್ವಹಣಾ ಕಚೇರಿ ಎದುರು ತಾಲೂಕಿನ ರೈತರೊಂದಿಗೆ ಪ್ರತಿಭಟಿಸುವುದಾಗಿ ಶಾಸಕ ಸಾ.ರಾ. ಮಹೇಶ್ ಹೇಳಿದರು.
ಹೊಸಅಗ್ರಹಾರ ಹೋಬಳಿಯಲ್ಲಿ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ನಂತರ ಕಲ್ಯಾಣಪುರ ಗ್ರಾಮದಲ್ಲಿ ನಾಲೆಯ ಆಧುನೀಕರಣ ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಳೆದ ವರ್ಷದಲ್ಲಿ ಬೇಸಿಗೆಯಲ್ಲಿ ಬೆಳೆ ನೀರು ಸಹ ಕೊಡದೇ ನಾಲೆಯ ಆಧುನೀಕರಣ ಕಾಮಗಾರಿ ಮಾಡಲಿ ಎಂದು ರೈತರ ಒಪ್ಪಿಗೆ ಪಡೆದು ಕಾಮಗಾರಿ ಪ್ರಾರಂಭಿಸಲಾಯಿತು. ಆದರೆ ಕಾಮಗಾರಿ ಅಪೂರ್ಣಗೊಂಡ ಹಿನ್ನೆಲೆ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶದಿಂದ ಈ ಸಾಲಿನಲ್ಲಿ ಕೂಡ ರೈತರಿಗೆ ಬೇಸಿಗೆ ಬೆಳೆಗೆ ನೀರು ಕೊಡಲಿಲ್ಲ. ಆದರೆ ನೀರಾವರಿ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ಸಾಲಿನಲ್ಲಿಯೂ ನಾಲೆಯ ಆಧುನೀಕರಣ ಕಾಮಗಾರಿ ಪೂರ್ಣಗೊಳಿಸಲು ಆಗುತ್ತಿಲ್ಲ ಎಂದು ದೂರಿದರು.
ಈ ಎಲ್ಲ ಅಂಶಗಳನ್ನು ಮನಗಂಡು ರೈತರೊಂದಿಗೆ ಚರ್ಚಿಸಿ ಮುಂದಿನ ತಿಂಗಳು ಮೇ 5ರಂದು ಮೈಸೂರಿನಲ್ಲಿರುವ ಕಾವೇರಿ ನೀರಾವರಿ ನಿಗಮದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕಚೇರಿ ಎದುರು ನಾಲಾ ಆಧುನೀಕರಣ ಕಾಮಗಾರಿ ವಿಳಂಬ ಮತ್ತು ನೀರಾವರಿ ಅಧಿಕಾರಿಗಳ ಬೇಜವಾಬ್ದಾರಿ ಖಂಡಿಸಿ, ತಾಲೂಕಿನ ರೈತರೊಂದಿಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.
ಬಿಳಿಕೆರೆ-ಬೇಲೂರು ರಸ್ತೆ ಡಾಂಬರೀಕರಣಕ್ಕೆ ಮೂರು ಕೋಟಿ ನೀಡಲಾಗಿದ್ದು, ಭೇರ್ಯ ಗ್ರಾಮದಲ್ಲಿ ಹಾಸನ-ಮೈಸೂರು ಹೆದ್ದಾರಿಗೆ ಡಾಂಬರೀಕರಣ ಕಾಮಗಾರಿ ಮಾಡುವಾಗ ದಿಢೀರನೇ ಬಂದ ಶಾಸಕರು, ರಸ್ತೆಗೆ ಹಾಕುತ್ತಿದ್ದ ಡಾಂಬರೀಕರಣದ ಗುಣಮಟ್ಟದಲ್ಲಿ ಪರಿಶೀಲಿಸಲಾಗಿ 40 ಸೆಂ.ಮೀ. ನಷ್ಟು ದಪ್ಪ ಡಾಂಬರೀಕರಣದ ರಸ್ತೆ ಮಾಡಬೇಕಿದ್ದು, ಬದಲಿಗೆ 30 ಸೆಂ.ಮೀ. ನಷ್ಟು ದಪ್ಪ ಡಾಂಬರೀಕರಣ ಮಾಡಿರುವುದನ್ನು ಕಂಡ ಶಾಸಕ ಸಾ.ರಾ. ಮಹೇಶ್ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು. ಇನ್ನು ಮುಂದೆ ಇಂತಹ ಕಾಮಗಾರಿಗಳಲ್ಲಿ ಲೋಪ ಬಾರದೆ ಇರುವ ಹಾಗೇ ನೋಡಿಕೊಳ್ಳಿ ಎಂದು ಸೂಚಿಸಿದರು.
ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ಗ್ರಾಪಂ ಸದಸ್ಯ ಬಿ.ಕೆ. ಕುಮಾರ್, ಗ್ರಾಪಂ ಮಾಜಿ ಸದಸ್ಯ ಚಿದಂಬರ, ಶಿವಕುಮಾರ್, ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಜುನೇದ್‌ಬೇಗ್, ಜೆಡಿಎಸ್ ಮುಖಂಡರಾದ ಶಂಕರ, ಅರ್ಜುನಹಳ್ಳಿ ಮಧು ಇದ್ದರು.