ರಸ್ತೆಯಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ
ಕ.ಪ್ರ.ವಾರ್ತೆ ಕೆ.ಆರ್. ನಗರ ಏ. 28
ಕೆ.ಆರ್. ನಗರ ಪಟ್ಟಣದಿಂದ ಹುಣಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗರುಡಗಂಭದ ವೃತ್ತದಿಂದ ಹೊರವಲಯದಲ್ಲಿರುವ ಕಾಗದದ ಕಾರ್ಖಾನೆಯವರೆಗೆ ಒಂದು ಅಡಿಗಳಷ್ಟು ಆಳದ ಗುಂಡಿಗಳು ಬಿದ್ದು ವರ್ಷಗಳೆ ಕಳೆದಿದ್ದರೂ, ರಸ್ತೆ ನಿರ್ವಹಣೆ ಮಾಡುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಚಾರಕ್ಕೆ ತೊಂದರೆಯಾಗಿದೆ.
ರಸ್ತೆಯಲ್ಲಿ ನೂರಾರು ಗುಂಡಿಗಳಿದ್ದು, ಅವುಗಳನ್ನು ತಪ್ಪಿಸಿ ವಾಹನ ಸಂಚಾರ ಮಾಡಲು ಕಷ್ಟ ಸಾಧ್ಯವಾಗಿದ್ದು, ಕೆಎಸ್‌ಆರ್‌ಟಿಸಿ ಡಿಪೋ ಎದುರಿನಲ್ಲಿ ದೊಡ್ಡದಾದ ಗುಂಡಿಗಳಿದ್ದು, ಮಳೆಗಾಲದಲ್ಲಿ ನೀರು ತುಂಬಿಕೊಂಡು ರಾಡಿಯಾಗಲಿದ್ದು, ಸಂಚಾರಿಗಳು ಸರ್ಕಸ್ ಮಾಡಿಕೊಂಡು ತೆರಳಬೇಕಿದೆ.
ಈ ಮಾರ್ಗದಲ್ಲಿ ನಿತ್ಯ ನೂರಾರು ಬಸ್‌ಗಳು, ಸಾವಿರಾರು ಖಾಸಗಿ ವಾಹನಗಳು, ಸಂಚರಿಸುತ್ತವೆ. ಆದರೆ ರಸ್ತೆ ದುರಸ್ತಿಪಡಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕಾದ ಅಧಿಕಾರಿಗಳಿಗೆ ಈ ಬಗ್ಗೆ ಗಮನ ಇಲ್ಲದಿರುವುದರಿಂದ ಅಪಘಾತಕ್ಕೆ ಕಾರಣವಾಗಿದ್ದು, ಇವರಿಗೆ ಹೇಳುವವರು ಕೇಳುವವರೆ ಇಲ್ಲದಂತಾಗಿದೆ. ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದರೂ ಈ ಮಾರ್ಗವಾಗಿ ಪ್ರತಿನಿತ್ಯ ಓಡಾಡುವ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆಯ ದುರಸ್ತಿಯ ಬಗ್ಗೆ ಗಮನ ಹರಿಸದೆ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಮುಖ್ಯ ರಸ್ತೆಯ ಸ್ಥಿತಿ ಹೀಗಾದರೆ ಗ್ರಾಮೀಣ ರಸ್ತೆಯ ಸ್ಥಿತಿ ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ರಸ್ತೆ ಸೂಚಕ ಫಲಕಗಳಿಲ್ಲ: ಲೋಕಕ್ಕೆ ಉಪಕಾರಿಯಾಗಬೇಕಾಗಿದ್ದ ಲೋಕೋಪಯೋಗಿ ಇಲಾಖೆ, ತೆರಿಗೆ ಕಟ್ಟಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮಾಲೀಕರಿಗೆ ಸಂಚರಿಸಲು ಅನುಕೂಲವಾಗುವಂತೆ ಫಲಕಗಳನ್ನು ಹಾಕುವಷ್ಟು ಸಮಯವಿಲ್ಲ. ಹೊಸದಾಗಿ ರಸ್ತೆಯಲ್ಲಿ ಸಂಚರಿಸುವವರು ದಾರಿಯುದ್ದಕ್ಕೂ ಸಿಕ್ಕವರನ್ನೆಲ್ಲ ಕೇಳಿಕೊಂಡು ಸಾಗುವ ಪರಿಸ್ಥಿತಿ ಇದೆ.
ಸರ್ಕಾರದಿಂದ ಅನುದಾನ ತಂದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅದು ಸಮರ್ಪಕವಾಗಿ ಸದ್ಬಳಕೆಯಾಗುತ್ತಿಲ್ಲ. ಸಾರ್ವಜನಿಕರ ಹಿತ ಪರಿಗಣಿಸಿ ಕೆಲಸ ಮಾಡುವ ಬದಲು ಕೆಲವೊಮ್ಮೆ ಗುತ್ತಿಗೆದಾರರ ಅನುಕೂಲಕ್ಕೆ ತಕ್ಕಂತೆ ಕಾಮಗಾರಿ ಮಾಡುವ ಅಧಿಕಾರಿಗಳ ವರ್ತನೆಯಿಂದ ಈ ರೀತಿ ಸಮಸ್ಯೆ ಎದುರಾಗಿದ್ದು, ಇದನ್ನು ಸರಿಪಡಿಸುವವರು ಯಾರು ಎಂಬುದು ತಿಳಿಯದಾಗಿದೆ.
ಶಾಸಕ ಸಾ.ರಾ. ಮಹೇಶ್ ಅವರು ಈಗಲಾದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಹದಗೆಟ್ಟಿರುವ ಕೆ.ಆರ್. ನಗರ- ಹುಣಸೂರು ಸಂಪರ್ಕ ರಸ್ತೆಯ ದುರಸ್ತಿಗೆ ಕ್ರಮಕೈಗೊಂಡು ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂಬುದು ನಾಗರಿಕರ ಆಗ್ರಹವಾಗಿದೆ.
ಕುಪ್ಪೆ ಮಹದೇವಸ್ವಾಮಿ