ರಾಮ್ದೇವ್ ಹೇಳಿಕೆ ಖಂಡಿಸಿ ಪ್ರತಿಕೃತಿ ದಹನ
ಕ.ಪ್ರ.ವಾರ್ತೆ ಮೈಸೂರು ಏ. 28
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ದಲಿತರ ಮನೆಗೆ ಹೋಗುವುದು ಪಿಕ್ನಿಕ್ ಮತ್ತು ಹನಿಮೂನ್ ಮಾಡಲು ಎಂದು ಹೇಳಿಕೆ ನೀಡಿರುವ ಬಾಬಾ ರಾಮದೇವ್ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟದವರು ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು.
ನಗರದ ಅಶೋಕಪುರಂ ಡಾ.ಅಂಬೇಡ್ಕರ್ ಉದ್ಯಾನದಿಂದ ಬೃಹತ್ ಪ್ರತಿಭಟನೆ ಆರಂಭವಾಯಿತು. ಜೆಎಲ್ಬಿ ರಸ್ತೆಯಲ್ಲಿದ್ದ ಸ್ವದೇಶಿ ಬಜಾರ್ನ ಪೋಸ್ಟರ್ನಲ್ಲಿ ಬಾಬಾ ರಾಮದೇವ್ ಇದ್ದ ಕಾರಣ ಪ್ರತಿಭಟನಾಕಾರರು ಹರಿದು ಹಾಕಿದರು. ರಾಮಸ್ವಾಮಿ ವೃತ್ತದಲ್ಲಿ ಬಾಬಾ ರಾಮದೇವ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿದರು. ಇನ್ನು ಜಗನ್ಮೋಹನ ಅರಮನೆ ಪಕ್ಕದ ಲಕ್ಷ್ಮಿ ವಿಲಾಸ ರಸ್ತೆಯಲ್ಲಿರುವ ಬಾಬಾ ರಾಮದೇವ್ ಸಂಸ್ಥೆಗೆ ಸೇರಿದ ಪತಂಜಲಿ ಚಿಕಿತ್ಸಾಲಯದ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಿ, ಬೋರ್ಡ್ ಅನ್ನು ಧ್ವಂಸಗೊಳಿಸಿದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ತಮ್ಮ ಹೇಳಿಕೆ ಮೂಲಕ ಅಸ್ಪೃಶ್ಯತೆ ಆಚರಿಸಿರುವ ಬಾಬಾ ರಾಮದೇವ್ ವಿರುದ್ಧ ಅಸ್ಪೃಶ್ಯತಾ ಆಚರಣಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಹಾಕಬೇಕು. ಬಾಬಾ ರಾಮದೇವ್ ಆಸ್ತಿ ಮತ್ತು ಮಠವನ್ನು ಸರ್ಕಾರ ವಶಪಡಿಸಿಕೊಂಡು ರಾಷ್ಟ್ರೀಕರಣ ಮಾಡಬೇಕು. ಅವರ ಆಶ್ರಮದಲ್ಲಿರುವ ಬಿಜೆಪಿ ನಾಯಕರ ಕಪ್ಪು ಹಣವನ್ನು ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರಕ್ಕೆ ವಶಕ್ಕೆ ಬರಲಿ: ಬಾಬಾ ರಾಮದೇವ್ ಸೇರಿದಂತೆ ಎಲ್ಲ ಆಶ್ರಮಗಳು, ಧಾರ್ಮಿಕ ಕೇಂದ್ರ, ಮಠಗಳು ಸರ್ಕಾರದ ವಶಕ್ಕೆ ಬರಬೇಕು. ಪ್ರತಿವರ್ಷ ಧಾರ್ಮಿಕ ಕೇಂದ್ರಗಳು ವಾರ್ಷಿಕ ಆದಾಯ ಘೋಷಿಸಿ, ತೆರಿಗೆ ಪಾವತಿಸುವಂತೆ ಹಾಲಿ ಇರುವ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತರಬೇಕು. ಭೂಮಿ ರಾಷ್ಟ್ರೀಕರಣವಾಗುವಂತೆ ನಿಯಮ ರೂಪಿಸಬೇಕು ಎಂದು ಒತ್ತಾಯಿಸಿದರು.
ಅಶೋಕಪುರಂ ಡಾ.ಅಂಬೇಡ್ಕರ್ ಉದ್ಯಾನದಿಂದ ಆರಂಭವಾದ ಮೆರವಣಿಗೆಯು ಅಶೋಕ (ಬಲ್ಲಾಳ್) ವೃತ್ತ, ಆರ್ಟಿಒ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಮಹಾರಾಜ ಸಂಸ್ಕೃತ ಪಾಠಶಾಲೆ, ಸಯ್ಯಾಜಿರಾವ್ ರಸ್ತೆ, ಜಗನ್ಮೋಹನ ಅರಮನೆ, ಕೃಷ್ಣವಿಲಾಸ ರಸ್ತೆ, ಜೆಎಲ್ಬಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು.
ಈ ವೇಳೆ ಮೆರವಣಿಗೆಯುದ್ದಕ್ಕೂ ತರಲಾದ ಬಾಬಾ ರಾಮದೇವ್ ಅವರ ಪ್ರತಿಕೃತಿಯನ್ನು ಪ್ರತಿಭಟನಾಕಾರರು ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಉಪ ವಿಭಾಗಾಧಿಕಾರಿ ಬಸವರಾಜು ಅವರಿಗೆ ಮನವಿ ಸಲ್ಲಿಸಿದರು.
ಮಾನಸಗಂಗೋತ್ರಿ, ಮಹಾರಾಜ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘಟನೆಯ ಸಾವಿರಾರು ಮಂದಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಪುರುಷೋತ್ತಮ್ ನೇತೃತ್ವ ವಹಿಸಿದ್ದರು. ಉಪ ಮೇಯರ್ ವಿ.ಶೈಲೇಂದ್ರ, ಮಾಜಿ ಉಪ ಮೇಯರ್ ಬಿ.ಸಿದ್ದರಾಜು, ದಸಂಸ ಮುಖಂಡ ದೇವಗಳ್ಳಿ ಸೋಮಶೇಖರ್, ಮುಖಂಡರಾದ ವಿ. ರಾಮಸ್ವಾಮಿ, ಜೆ.ರವಿ, ರೇವಣ್ಣ, ಈಶ್ವರ್ ಚಕ್ಕಡಿ, ಪಿ.ಈಶ್ವರ್, ವಿಶ್ವೇಶ್ವರಯ್ಯ, ವಾಸು, ಅರುಣ್ ಇದ್ದರು.