ಅಕ್ರಮ ಮದ್ಯ ಮಾರಾಟ ತಡೆಗೆ ಒತ್ತಾಯ
ಕ.ಪ್ರ.ವಾರ್ತೆ ಕೆ.ಆರ್. ನಗರ ಏ. 29
ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ, ತಾಲೂಕಿನ ಡಿ.ಕೆ. ಕೊಪ್ಪಲು ಗ್ರಾಮಸ್ಥರು ಅಬಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಬಳಿಯಿಂದ ಮೆರವಣಿಗೆಯಲ್ಲಿ ತೆರಳಿದ ಗ್ರಾಮಸ್ಥರು ಮತ್ತು ಮಹಿಳಾ ಸಂಘದ ಸದಸ್ಯರು, ಅಬಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರಲ್ಲದೆ ಅಕ್ರಮ ಮದ್ಯ ಮಾರಾಟ ತಡೆಯಲು ವಿಫಲವಾಗಿರುವ ಅಧಿಕಾರಿಗಳ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಜಯಮ್ಮ ಬಲರಾಮೇಗೌಡ ಮತ್ತು ಮೀನಾ ಕುಚೇಲಗೌಡ ಎಂಬವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಇಲಾಖಾ ಅಧಿಕಾರಿಗಳಿಗೆ ಗ್ರಾಮಸ್ಥರು ಲಿಖಿತವಾಗಿ ದೂರು ನೀಡಿದರೂ, ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ ಎಂದು ದೂರಿದ ಪ್ರತಿಭಟನಾಕಾರರು, ಇಲಾಖೆ ಅಧಿಕಾರಿಗಳು ಭೇಟಿ ಮಾಡಿದ ವೇಳೆ ಮದ್ಯ ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದರೂ ಕೇವಲ ತಪ್ಪೊಪ್ಪಿಗೆ ಪತ್ರಕ್ಕೆ ಸಹಿ ಮಾಡಿಸಿದ್ದು, ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು. ಒಂದೆರಡು ದಿನಗಳಲ್ಲಿ ಮಾರಾಟ ತಡೆದು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಬ್ಯಾಡರಹಳ್ಳಿ ಗ್ರಾಪಂ ಅಧ್ಯಕ್ಷ ರಂಗೇಶ್‌ಕುಮಾರ್, ವರಲಕ್ಷ್ಮಿ ಮಹಿಳಾ ಸ್ವ-ಸಹಾಯ ಸಂಘದ ಎಚ್.ಜೆ. ಸೌಮ್ಯ, ಲೀಲಾವತಿ, ಅನಿತಾ, ದೇವಮ್ಮ, ಶ್ರೀಕಾವೇರಿ ಸ್ವ-ಸಹಾಯ ಸಂಘದ ಚನ್ನಮ್ಮ, ನಿಂಗಮ್ಮ, ತೇಜಸ್ವಿನಿ, ಅನುಸೂಯ, ಭೈರವೇಶ್ವರ ಮಹಿಳಾ ಸಂಘದ ಶಶಿಕಲಾ, ರೂಪ, ಮಂಜುಳ, ಅನ್ನಪೂರ್ಣ, ಗ್ರಾಮದ ಶೇಖರ್, ಬಸವೇಗೌಡ, ಶಿವರಾಜು, ರಾಮಚಂದ್ರ, ಚಂದ್ರೇಗೌಡ, ಸಂತೋಷ್, ಕೆ.ಟಿ. ವೆಂಕಟೇಶ್ ಇದ್ದರು.