ಕಬಿನಿ ಹಿನ್ನೀರಲ್ಲಿ ಮೀನುಗಾರಿಕೆ: ಒಬ್ಬ ಸೆರೆ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಏ. 29
ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ಅಕ್ರಮವಾಗಿ ಮೀನು ಹಿಡಿಯುತ್ತಿದ್ದ ನಾಲ್ಕು ಮಂದಿಯಲ್ಲಿ ಒಬ್ಬನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಡಿ.ಬಿ. ಕುಪ್ಪೆ ಅರಣ್ಯ ವಲಯದ ಮಾಸ್ತಿಗುಡಿ ಗಸ್ತಿನಲ್ಲಿ ಕಾಣಸಿಗುವ ಕೊಟ್ಟಿಗೆ ತಿಟ್ಟಿನ ಬಳಿ ನಿಖರ ಮಾಹಿತಿ ಮೇರೆಗೆ ತೆರಳಿದ ಸಿ.ಎಫ್. ಹನುಮಂತಪ್ಪ ನೇತೃತ್ವದ ತಂಡ ದಾಳಿ ನಡೆಸಿ ಮೀನು ಹಿಡಿಯುತ್ತಿದ್ದ ಗುಂಡತ್ತೂರು ಗ್ರಾಮದ ಸೋಮೇಶ್ ಎಂಬಾತನನ್ನು ಬಂಧಿಸಿದ್ದಾರೆ. ಜೊತೆಯಲ್ಲಿದ್ದ ಕುಮಾರ್, ನರಸಿಂಹ ಹಾಗೂ ನಟರಾಜು ತಪ್ಪಿಸಿಕೊಂಡಿದ್ದಾರೆ.
ತಪ್ಪಿಸಿಕೊಂಡಿರುವ ಮೂವರು ಆರೋಪಿಗಳನ್ನು ಬಂಧಿಸಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಲಾಖಾ ಸಿಬ್ಬಂದಿ ರವಿ, ಮುತ್ತುರಾಜ್, ಸಂಜು, ಮದನ್, ಮೋಹನ್ ಭಾಗವಹಿಸಿದ್ದರು.
ಕಬಿನಿ ಹಿನ್ನೀರಿನಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬಂದರೂ ಗಮನ ಹರಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. ಆದರೆ ಮೇಲಧಿಕಾರಿಗಳ ಸೂಚನೆಯಂತೆ ಅರಣ್ಯ ಇಲಾಖಾ ಸಿಬ್ಬಂದಿ ಕಾರ್ಯಪ್ರವೃತರಾಗಿ ಓರ್ವನನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ.