ಬೆಂಗಳೂರು- ಮೈಸೂರು ಷಟ್ಪಥ ರಸ್ತೆಯಾಗಿ ಪರಿವರ್ತನೆಗೆ ಪ್ರಸ್ತಾವ
ಕ.ಪ್ರ.ವಾರ್ತೆ ಬೆಂಗಳೂರು ಏ. 29
ಬೆಂಗಳೂರು- ಮೈಸೂರು ರಾಜ್ಯ ಹೆದ್ದಾರಿಯನ್ನು ಷಟ್ಪಥ ಮಾರ್ಗವಾಗಿ ಪರಿವರ್ತಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರು- ಮೈಸೂರು, ಮಡಿಕೇರಿ- ಬಂಟ್ವಾಳ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿ ಅಭಿವೃದ್ಧಿಪಡಿಸುವ ವಿಚಾರ ಸಂಬಂಧ ಆಯೋಜಿಸಿದ್ದ ಸಭೆ ಬಳಿಕ ಸುದ್ದಿಗಾರರಿಗೆ ಮಂಗಳವಾರ ಈ ವಿಷಯ ತಿಳಿಸಿದರು.
ಈ ಎರಡು ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಜತೆಗೆ ಬೆಂಗಳೂರು- ಮೈಸೂರು ಮಾರ್ಗದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಷಟ್ಪಥ ಮಾರ್ಗವಾಗಿ ಪರಿವರ್ತಿಸುವಂತೆ ಕೇಂದ್ರ ಮನವೊಲಿಸಲು ಇಂದು ದೆಹಲಿಗೆ ತೆರಳುತ್ತಿದ್ದೇನೆ. ಜತೆಗೆ ರಾಜ್ಯದ 1160 ಕಿ ಮೀ ವ್ಯಾಪ್ತಿಯ ರಾಜ್ಯ ಹೆದ್ದಾರಿಯನ್ನು ಹಂತಹಂತವಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಹೇಳಿದರು.