ಮೃಗಾಲಯ ಉನ್ನತೀಕರಣಕ್ಕೆ ಯೋಜನೆ
ಕ.ಪ್ರ.ವಾರ್ತೆ ಮೈಸೂರು ಏ. 29
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯವನ್ನು ಜನಸ್ನೇಹಿ ಮತ್ತು ವನ್ಯ ಸ್ನೇಹಿಯನ್ನಾಗಿಸಲು ಹಲವು ಕಾರ್ಯಕ್ರಮ ರೂಪಿಸಲಾಗಿದೆ.
ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಮೈಸೂರು ಮೃಗಾಲಯದ ಸಭಾಂಗಣವನ್ನು ಆಸ್ಪತ್ರೆಯಿಂದ ಪ್ರತ್ಯೇಕಿಸುವ ಮತ್ತು ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಪ್ರಥಮ ಹಂತವಾಗಿ ಕಾರ್ಯ ಪ್ರವೃತ್ತವಾಗಿರುವ ಮೃಗಾಲಯ ಅಧಿಕಾರಿಗಳು ಈಗ ಇರುವ ಟಿಕೆಟ್ ವಿತರಣಾ ವ್ಯವಸ್ಥೆಯನ್ನು ಮೃಗಾಲಯದ ಒಳ ಆವರಣಕ್ಕೆ ಸ್ಥಳಾಂತರಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.
ಚಾಮುಂಡಿಬೆಟ್ಟ, ರೇಸ್‌ಕೋರ್ಸ್, ಮಾಲ್ ಆಫ್ ಮೈಸೂರು ಕಡೆಗೆ ತೆರಳುವ ಮಾರ್ಗದಲ್ಲಿರುವ ಮೃಗಾಲಯದ ಮುಖ್ಯ ದ್ವಾರದಲ್ಲಿ ಹೆಚ್ಚು ಜನಸಂದಣಿ ಉಂಟಾಗುವ ಜೊತೆಗೆ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಈ ಬಗ್ಗೆ ಪೊಲೀಸರಿಂದ ನಿರಂತರವಾಗಿ ದೂರು ಕೇಳಿ ಬರುತ್ತಿದೆ. ಆದ್ದರಿಂದ ಚಲನಚಿತ್ರ ಮಂದಿರಗಳಂತೆ ಪ್ರವಾಸಿಗರನ್ನು ನೇರವಾಗಿ ಮೃಗಾಲಯದ ಆವರಣಕ್ಕೆ ಬಿಟ್ಟು ಒಳಗೆ ಕೌಂಟರ್ ತೆರೆದು ಟಿಕೆಟ್ ನೀಡುವ ವ್ಯವಸ್ಥೆ ಮಾಡಲು ಮೃಗಾಲಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃಗಾಲಯ ಒಳ ಆವರಣದಲ್ಲಿನ ವಾಹನ ನಿಲ್ದಾಣವನ್ನು ಹೊರಕ್ಕೆ ಸ್ಥಳಾಂತರಿಸಲಾಗಿದೆ.
ವಾಹನ ನಿಲ್ದಾಣ ವ್ಯವಸ್ಥೆ: ಮೃಗಾಲಯ ಎದುರಿನ ಉದ್ಯಾನ ಜಾಗವನ್ನು ನಗರ ಪಾಲಿಕೆ ಅನುಮತಿ ಮೇರೆಗೆ ಪ್ರವಾಸಿಗರ ವಾಹನ ನಿಲ್ದಾಣಕ್ಕೆ ಬಳಸಿಕೊಳ್ಳುತ್ತಿದೆ. ಮೃಗಾಲಯಕ್ಕೆ ಬರುವ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಈಗ ಅದೆ ಸ್ಥಳದಲ್ಲಿ ನರ್ಮ್ ಯೋಜನೆಯಡಿ ಬಹುಮಹಡಿ ವಾಹನ ನಿಲ್ದಾಣ ನಿರ್ಮಿಸಲು ಪಾಲಿಕೆ ಉದ್ದೇಶಿಸಿದೆ. ಈ ಯೋಜನೆ ಕಾರ್ಯಗತ ಆಗುವವರೆಗೂ ಮೃಗಾಲಯ ಹೊರಗೆ ವಾಹನ ನಿಲ್ದಾಣ ವ್ಯವಸ್ಥೆ ಮಾಡಿದೆ. ಉಳಿದಂತೆ ಮೃಗಾಲಯದಲ್ಲಿ ನಡೆಯುವ ಅನೇಕ ಕಾರ್ಯಕ್ರಮಗಳು ಈಗಿನ ಪ್ರಾಣಿ ಆಸ್ಪತ್ರೆಯ ಮೇಲಿನ ಸಭಾಂಗಣದಲ್ಲಿ ನಡೆಯುತ್ತಿದೆ.
ಆದರೆ ಪ್ರಾಣಿ ಆಸ್ಪತ್ರೆಯ ಬಳಿ ಇಂತಹ ಕಾರ್ಯಕ್ರಮಗಳು ನಡೆಯುವಂತಿಲ್ಲ. ಅಲ್ಲದೆ ಆಸ್ಪತ್ರೆ ಬಳಿ ಸಾರ್ವಜನಿಕರ ಪ್ರವೇಶ ಇರುವಂತಿಲ್ಲ.
ಆದ್ದರಿಂದ ಮೃಗಾಲಯದ ಸಂಪನ್ಮೂಲವನ್ನೇ ಬಳಸಿಕೊಂಡು ದಕ್ಷಿಣ ದ್ವಾರದ ಬಳಿ ಒಂದು ಸುಂದರ ಸಭಾಂಗಣ ನಿರ್ಮಿಸಲಾಗುತ್ತಿದೆ. ಈ ಸಭಾಂಗಣವು ಮೈಸೂರು ವಿವಿಯ ಬಯಲು ರಂಗಮಂದಿರ ಅಥವಾ ರಂಗಾಯಣದ ವನರಂಗದ ಮಾದರಿಯಲ್ಲಿ ನಿರ್ಮಿಸಲು ಚಿಂತಿಸಲಾಗಿದೆ.
ಇದರ ಸಮೀಪ ಪ್ರವಾಸಿಗರ ಅನುಕೂಲಕ್ಕೆ ಒಂದು ಕ್ಯಾಂಟೀನ್ ಅಥವಾ ರೆಸ್ಟೊರೆಂಟ್ ತೆರೆಯಲು ಯೋಜನೆ ಸಿದ್ಧಪಡಿಸಲಾಗಿದೆ. ಈ ಎಲ್ಲಾ ಯೋಜನೆಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸರ್ಕಾರ ಅನುದಾನ ನೀಡದಿದ್ದರೆ, ಅನುಮತಿ ಪಡೆದು ನಮ್ಮ ಸಂಪನ್ಮೂಲದಲ್ಲಿಯೇ ಈ ಯೋಜನೆ ಕಾರ್ಯಗತಗೊಳಿಸುವುದಾಗಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಕನ್ನಡಪ್ರಭಕ್ಕೆ ತಿಳಿಸಿದರು.
ಡಿ.ಎನ್. ಮಹೇಂದ್ರ