ಶಿಕ್ಷಣ ಸಂಸ್ಥೆಗಳ ಮಾರಾಟ ದಂಧೆ
ಕ.ಪ್ರ.ವಾರ್ತೆ ಮೈಸೂರು ಏ. 29
ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ ಪಠ್ಯ ಪುಸ್ತಕ, ನೋಟ್, ಸಮವಸ್ತ್ರ ಮಾರಾಟವನ್ನು ಸಹ ದಂಧೆಯಾಗಿ ಮಾಡಿಕೊಂಡಿವೆ ಎಂದು ಆರೋಪಿಸಿ ಮೈಸೂರು ರಕ್ಷಣಾ ವೇದಿಕೆಯವರು ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಪುಸ್ತಕ ಮಳಿಗೆಯೊಂದರ ಎದುರು ಮಂಗಳವಾರ ಪ್ರತಿಭಟಿಸಿದರು.
ಮಕ್ಕಳ ಪೋಷಕರಿಂದ ಖಾಸಗಿ ಶಾಲೆಗಳು ಸುಲಿಗೆ ಮಾಡುತ್ತಿವೆ. ಈಗ ಪುಸ್ತಕ, ಸಮವಸ್ತ್ರದ ನೆಪದಲ್ಲಿ ಮತ್ತಷ್ಟು ಸುಲಿಗೆ ಮಾಡುತ್ತಿವೆ. ಖಾಸಗಿ ಶಾಲೆಗಳು ಕಮಿಷನ್ ಆಸೆಯಿಂದ ಕೆಲವು ಪುಸ್ತಕ ವ್ಯಾಪಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಪುಸ್ತಕ ವ್ಯಾಪಾರಿಗಳು ಶಾಲೆ ಮತ್ತು ಪೋಷಕರ ನಡುವೆ ದಲ್ಲಾಳಿಗಳಂತೆ ಕೆಲಸ ಮಾಡುತ್ತಿದ್ದಾರೆ. ನಿಗದಿಗಿಂತ ಹೆಚ್ಚಿನ ಬೆಲೆಗೆ ಪುಸ್ತಕ ಮಾರಿ, ಕಮಿಷನ್ ಅನ್ನು ಶಾಲಾ ಆಡಳಿತ ಮಂಡಳಿಗೆ ವ್ಯಾಪಾರಿಗಳು ನೀಡುತ್ತಿದ್ದಾರೆ ಎಂದು ದೂರಿದರು.
ಎಲ್ಕೆಜಿ, 1ನೇ ತರಗತಿ ಪುಸ್ತಕ ಹಾಗೂ ಇತರೆ ಸಾಮಗ್ರಿಗಳಿಗೆ 2500 ರಿಂದ 4000 ನಿಗದಿ ಮಾಡಿದ್ದಾರೆ. ಶಾಲೆಗಳ ಹಾಗೂ ವ್ಯಾಪಾರಿಗಳ ಲಾಭಕ್ಕೆ ಪೋಷಕರು ಬಲಿಪಶು ಆಗುತ್ತಿದ್ದಾರೆ ಎಂದರು.
ಮೈಸೂರು ರಕ್ಷಣಾ ವೇದಿಕೆಯ ಕಾರ್ಯದರ್ಶಿ ರಾಕೇಶ್ ಭಟ್, ಮುಖಂಡರಾದ ಗುರುರಾಜ್ ಶೆಟ್ಟಿ, ವಿಕ್ರಮ್, ಪ್ರಮೋದ್ಗೌಡ, ಎಸ್.ಎನ್. ರಾಜೇಶ್, ಜಿ.ರಾಘವೇಂದ್ರ, ಗುರುಮೂರ್ತಿ, ಪ್ರಶಾಂತ್, ತನು, ಸಂತೋಷ್, ನಿತಿನ್, ಉಮೇಶ್, ದೀಪಕ್, ದುರ್ಗಾಪ್ರಕಾಶ್, ಚಂದ್ರು ಇದ್ದರು.
ಪ್ರತಿಭಟನೆಗೆ ಮಳಿಗೆ ಬಂದ್
ಮೈಸೂರು: ಸೂಕ್ತ ಪರವಾನಗಿ ಇಲ್ಲದೆ ಶಾಲಾ ಪಠ್ಯಪುಸ್ತಕ ಹಾಗೂ ಇತರೆ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಶ್ರೀಮೈಸೂರು ಬುಕ್ ಏಜೆನ್ಸಿ ಮೇಲೆ ನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಬಂದ್ ಮಾಡಿಸಿರುವ ಘಟನೆ ಮಂಗಳವಾರ ನಡೆದಿದೆ. ಈ ಮಳಿಗೆಯಲ್ಲಿ ಮೂರು ವರ್ಷದಿಂದ ಪುಸ್ತಕ ವ್ಯಾಪಾರ ನಡೆಯುತ್ತಿದರೂ ಎನ್ಒಸಿ, ವ್ಯಾಪಾರ ಪರವಾನಗಿ, ವಾಣಿಜ್ಯ ಪರವಾನಗಿ ಸೇರಿದಂತೆ ಇನ್ನಿತರ ಯಾವುದೇ ಸೂಕ್ತ ದಾಖಲಾತಿಗಳನ್ನು ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿ ಮಳಿಗೆಯನ್ನು ಬಂದ್ ಮಾಡಿಸಿದ್ದಾರೆ. 24 ಗಂಟೆಯೊಳಗೆ ಸೂಕ್ತ ದಾಖಲೆಗಳನ್ನು ಹಾಜರುಪಡಿಸದಿದ್ದಲ್ಲಿ ಮಳಿಗೆಗೆ ಬೀಗಮುದ್ರೆ ಹಾಕುವುದಾಗಿ ಅಧಿಕಾರಿಗಳು ಎಚ್ಚರಿಸಿದರು.