ಕಡಿಮೆಯಾಗುತ್ತಿರುವ ಪರಂಪರೆ ಅನುಸಂಧಾನ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಏ. 30
ಅಧ್ಯಾಪಕ ಮತ್ತು ವಿದ್ಯಾರ್ಥಿಗಳಲ್ಲಿ ಪ್ರಾಚೀನ ಸಾಹಿತ್ಯದ ವಿಷಯದಲ್ಲಿ ಆಸಕ್ತಿ ಕುಗ್ಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಪರಂಪರೆ ಅನುಸಂಧಾನವೂ ಕಡಿಮೆಯಾಗುತ್ತಿದೆ ಎಂದು ಸಾಹಿತಿ ಪ್ರೊ.ಸಿ.ಪಿ. ಕೃಷ್ಣಕುಮಾರ್ ವಿಷಾದಿಸಿದರು.
ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಅಂತಿಮ ವರ್ಷದ ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಅಧ್ಯಾಪಕರು, ವಿದ್ಯಾರ್ಥಿಗಳು ಇಂದು ಸೃಜನಶೀಲ ಸಾಹಿತ್ಯದ ಬಗ್ಗೆ ತೋರುತ್ತಿರುವ ಆಸಕ್ತಿಯನ್ನು ಪ್ರಾಚೀನ ಸಾಹಿತ್ಯದ ಅಧ್ಯಯನದಲ್ಲಿ ತೋರುತ್ತಿಲ್ಲ. ಇಂಗ್ಲಿಷ್ ಸಾಹಿತ್ಯದ ಬಗ್ಗೆ ವ್ಯಾಮೋಹ ಬೆಳೆಸಿಕೊಳ್ಳುತ್ತಿಲ್ಲ. ಇತ್ತೀಚೆಗೆ ಸಾಹಿತ್ಯ ಕೃತಿಗಳನ್ನು ಓದುವ ಅಭಿರುಚಿ ಕಡಿಮೆಯಾಗುತ್ತಿದೆ. ಓದುವ ಅಭಿರುಚಿ ಕಡಿಮೆಯಾದರೆ, ಪ್ರಜ್ಞಾವಂತಿಕೆ ಹೋಗಿ, ವಿವೇಕವೂ ಮಾಯವಾಗುತ್ತದೆ ಎಂದು ಹೇಳಿದರು.
ಕಾವ್ಯದ ಸಂಪರ್ಕ ಬದುಕಿಗೆ ಮುಖ್ಯ. ಉತ್ತಮ ಮನುಷ್ಯನಾಗಲು ಕಾವ್ಯ ಅಧ್ಯಯನ ಮಾಡಬೇಕು. ಕಾವ್ಯ ಆನಂದವನ್ನು, ಸಾಮಾಜಿಕ ಅರಿವನ್ನು, ಜೀವನ ಪ್ರೀತಿಯನ್ನು ನೀಡುತ್ತದೆ ಎಂದು ನುಡಿದರು. ಐಚ್ಛಿಕ ಕನ್ನಡ ವಿದ್ಯಾರ್ಥಿಗಳು ಬರವಣಿಗೆ ರೂಢಿಸಿಕೊಳ್ಳಬೇಕು. ಬರವಣಿಗೆಯೇ ಬೆಳವಣಿಗೆ. ನಾವು ತೆಂಗಿನ ಮರಕ್ಕೆ ತಲೆಬಾಗಬೇಕೆ ಹೊರತು ಪಾರ್ಥೇನಿಯಂ ಗಿಡಕ್ಕಲ್ಲ ಎಂದು ಹೇಳಿದರು.
ಸಿಪಿಕೆಗೆ ಅಭಿನಂದನೆ: ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ ಅವರು 75 ವಸಂತ ತುಂಬಿದ ಸಿಪಿಕೆ ಅವರನ್ನು ಅಭಿನಂದಿಸಿ ಮಾತನಾಡಿ, ಸಿಪಿಕೆ ಅವರು ಇಂಗ್ಲಿಷ್, ಕನ್ನಡ, ಸಂಸ್ಕೃತ, ಸಾಹಿತ್ಯದ ಬಗ್ಗೆ ಹೊಂದಿರುವ ವಿದ್ವತ್ತು, ಶಿಸ್ತು, ವಿನಯ ಅವರ ಆಡಂಭರವಿಲ್ಲದ ಬದುಕು, ಅಹಂಕಾರವಿಲ್ಲದ ವ್ಯಕ್ತಿತ್ವ ಇಂದಿನ ಯುವಜನತೆಗೆ ಅನುಕರಣೀಯವಾಗಿದೆ. ಸಿಪಿಕೆ ಅವರು ಕಷ್ಟಗಳ ನಡುವೆ ಅರಳಿದ ಸುಂದರವಾದ ಗುಲಾಬಿ. 75 ವರ್ಷದಲ್ಲೂ ಅವರಲ್ಲಿ ಹಾಸ್ಯ ಪ್ರಜ್ಞೆ ಕುಂದಿಲ್ಲ. ಅವರೇ ಹೇಳುವಂತೆ, ನನ್ನಲ್ಲಿ ಹಾಸ್ಯ ಪ್ರಜ್ಞೆ ಇಲ್ಲದಿದ್ದರೆ ನಾನು ಎಂದೋ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದಿರುವ ಮಾತಿನ ಹಿಂದಿರುವ ಬದುಕನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಆರ್. ವಾಸುದೇವಮೂರ್ತಿ, ಪ್ರಭಾರ ಪ್ರಾಂಶುಪಾಲೆ ಡಾ.ಕೆ.ಆರ್. ಗಾಯತ್ರಿ ಮಾತನಾಡಿದರು. ವಿದ್ಯಾರ್ಥಿ ಸಂಸತ್‌ನಲ್ಲಿ ಸತತ ಮೂರು ವರ್ಷ ಕ್ರಿಯಾಶೀಲ ವಿದ್ಯಾರ್ಥಿ ಪ್ರತಿನಿಧಿಯಾಗಿ, ಅಧ್ಯಕ್ಷನಾಗಿ, ಎನ್‌ಎಸ್‌ಎಸ್ ನಾಮಕನಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಅಂತಿಮ ಕನ್ನಡ ವಿದ್ಯಾರ್ಥಿ ಸಿ.ಎಂ.ಕಿರಣ್‌ಕುಮಾರ್ ಅವರನ್ನು ಸಿಪಿಕೆ ಅಭಿನಂದಿಸಿ, ಹಿರಿಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಿದರು.
ಡಾ.ವಿನೋದಮ್ಮ ರಚಿಸಿದ ವಿದಾಯಗೀತೆಯನ್ನು ಅನನ್ಯ ಭಟ್ ಮತ್ತು ಸಂಗಡಿಗರು ಹಾಡಿದರು. ಬಿ.ರಾಜೇಶ್ ಸ್ವಾಗತಿಸಿದರು. ಕೆ.ಅಭಿಷೇಕ್ ನಾಯಕ್ ವಂದಿಸಿದರು. ಶ್ರೀಧರ್ ಭಾರದ್ವಜ್ ಪ್ರಾರ್ಥಿಸಿದರು.