ರಾಮದೇವ್ ವಿರುದ್ಧ ಪೊರಕೆ ಚಳವಳಿ
ಮೈಸೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ದಲಿತ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಾಬಾ ರಾಮದೇವ್ ವಿರುದ್ಧ ಮೈಸೂರು ನಗರಪಾಲಿಕೆ ಸಂಘ, ಗುತ್ತಿಗೆ ಪೌರಕಾರ್ಮಿಕರ ಸಂಘದವರು ನಗರದ ಗಾಂಧಿ ಚೌಕದಲ್ಲಿ ಬುಧವಾರ ಪೊರಕೆ ಚಳವಳಿ ಹಮ್ಮಿಕೊಂಡಿದ್ದರು. ಬಾಬಾ ರಾಮದೇವನನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಶಾಸಕ ಎಂ.ಕೆ. ಸೋಮಶೇಖರ್, ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಮಾಜಿ ಮೇಯರ್‌ಗಳಾದ ನಾರಾಯಣ, ಅನಂತ, ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಎನ್.ಮಾರ, ಶ್ರೀನಿವಾಸ್, ಮುರುಗೇಶ್, ಧನರಾಜ್, ಕುಮಾರಸ್ವಾಮಿ, ಹನುಮಂತ, ಜಗದೀಶ್ ಇದ್ದರು.
ಕ್ಷಮೆಯಾಚಿಸಲು ಆಗ್ರಹ
ಬಾಬಾ ರಾಮದೇವ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡುವ ಭರದಲ್ಲಿ ದಲಿತರ ಬಗ್ಗೆ ಅಪಮಾನಕರ ಹೇಳಿಕೆ ನೀಡಿರುವುದು ಖಂಡನೀಯ. ಇಂತಹ ಹೇಳಿಕೆ ನೀಡಿರುವ ಬಾಬಾ ರಾಮದೇವ್ ಈ ಕೂಡಲೇ ದಲಿತರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಎಂ.ಶಿವಕುಮಾರ್ ಆಗ್ರಹಿಸಿದ್ದಾರೆ.
ಬಾಬಾ ಭಾವಚಿತ್ರಕ್ಕೆ ಬೆಂಕಿಹಚ್ಚಿ ಆಕ್ರೋಶ
ರಾಹುಲ್ ಗಾಂಧಿ ಮತ್ತು ದಲಿತರ ಬಗ್ಗೆ ಅವಹೇಳನ ಮಾಡಿರುವ ಬಾಬಾ ರಾಮದೇವನನ್ನು ಬಂಧಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಎರಡು ಬಣದವರು ಗಾಂಧಿಚೌಕ ಹಾಗೂ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತ್ಯೇಕವಾಗಿ ಪ್ರತಿಭಟಿಸಿದರು. ಎರಡು ಕಡೆ ಸಹ ಬಾಬಾ ರಾಮದೇವ್ ಭಾವಚಿತ್ರ ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ದಸಂಸ ಮುಖಂಡರಾದ ದೇವಗಳ್ಳಿ ಸೋಮಶೇಖರ್, ಬೆಲವತ್ತ ರಾಮಚಂದ್ರ, ಜಯಲಕ್ಷ್ಮಿ ರಂಗಸ್ವಾಮಿ, ಬೊಕ್ಕಹಳ್ಳಿ ಮಹದೇವಸ್ವಾಮಿ, ಆಲಗೂಡು ಶಿವಕುಮಾರ್, ರಾಜಣ್ಣ ಇದ್ದರು.