ಅದ್ಧೂರಿ ಸ್ವಾತಂತ್ರ್ಯೋತ್ಸವಕ್ಕೆ ನಿರ್ಧಾರ
ಹುಣಸೂರು: ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಎಲ್ಲರ ಸಹಕಾರದೊಂದಿಗೆ ಸಂಭ್ರಮ ಸಡಗರದಿಂದ ಆಚರಿಸಲು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನಿರ್ಧರಿಸಿದೆ.
ಗುರುವಾರ ತಾಲೂಕು ಕಚೇರಿಯ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷ, ತಹಸೀಲ್ದಾರ್ ವೆಂಕಟಾಚಲಪ್ಪ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರ ಸಹಕಾರ ಹಾಗೂ ಪಾಲ್ಗೊಳ್ಳುವಿಕೆ ಮೂಲಕ ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಯಿತು.
ಪಟ್ಟಣದ ಪುರಸಭಾ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಂದು ಬೆಳಗ್ಗೆ 9ಕ್ಕೆ ಉಪವಿಭಾಗಾಧಿಕಾರಿ ಧ್ವಜಾರೋಹಣ ನೆರವೇರಿಸುವರು. ಶಾಸಕ ಎಚ್.ಪಿ. ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದು, ಪಟ್ಟಣದ ವಿವಿಧ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನದ ಮೂಲಕ ಧ್ವಜವಂದನೆ ಸಲ್ಲಿಸುವರು. ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವರು ಎಂದು ತಹಸೀಲ್ದಾರ್ ತಿಳಿಸಿದರು.
ಜಿಪಂ ಎಇಇ ಪೂಣಚ್ಚ, ವೃತ್ತ ನಿರೀಕ್ಷಕ ಎ. ಮಲ್ಲೇಶ್, ಬಿಇಒ ರಾಜಶೇಖರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಪಿ.ಆರ್. ರಾಚಪ್ಪ, ಭಾಸ್ಕರ್, ಸುಬ್ಬರಾವ್, ದಸಂಸದ ಡಿ. ಕುಮಾರ್, ಆರ್ಎಫ್ಒ ಶಿವರಾಮ್, ತಾಲೂಕು ಬಿಜೆಪಿ ಅಧ್ಯಕ್ಷ ಹನಗೋಡು ಮಂಜುನಾಥ್, ಅಧ್ಯಾಪಕ ಪುಟ್ಟಶೆಟ್ಟಿ, ಪುರಸಭೆಯ ಆರೋಗ್ಯ ಸಹಾಯಕ ಸತೀಶ್ ಇದ್ದರು.