ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅಗತ್ಯ
ಪಿರಿಯಾಪಟ್ಟಣ: ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಸರ್ಕಲ್ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್ ಹೇಳಿದರು.
ಪಟ್ಟಣದ ತಮ್ಮ ಕಚೇರಿಯಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪೊಲೀಸರು ದಿನದ 24 ಗಂಟೆಯೂ ಸಾರ್ವಜನಿಕರ ಸೇವೆಗೆ ಲಭ್ಯವಿರುತ್ತಾರೆ. ಪೊಲೀಸರ ಗಮನಕ್ಕೆ ಬಾರದ ಹಲವಾರು ಘಟನೆಗಳು ಸಮಾಜದಲ್ಲಿ ಜರುಗುತ್ತಿರುತ್ತವೆ ಅದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ. ಇಂತಹ ಘಟನೆಗಳನ್ನು ಪೊಲೀಸರ ಗಮನಕ್ಕೆ ತಂದಲ್ಲಿ ಸಮಸ್ಯೆಗಳು ಆಗದಂತೆ ಪೊಲೀಸರು ನಿಗವಹಿಸಲು ಸಾಧ್ಯವಾಗುತ್ತದೆ ಎಂದರು.
ಪಟ್ಟಣದ ಬಸವೇಶ್ವರ ವೃತ್ತಕ್ಕೆ ಸಿಗ್ನಲ್ ಹಾಕಿಸುವ ಹಾಗೂ ಸಿಸಿ ಕ್ಯಾಮೆರಾ ಅಳವಡಿಸುವ ಬಗ್ಗೆ ಪ್ರಸ್ತಾಪಿಸಲಾಗುತ್ತಿದೆ. ಪಟ್ಟಣದಲ್ಲಿ ವಾಹನ ಸಂಚಾರದ ಸಮಸ್ಯೆಯೇ ಹೆಚ್ಚಿದ್ದು, ಇದನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಪಟ್ಟಣದ ಸಂಚಾರ ಸಮಸ್ಯೆ ಬಗೆಹರಿಸುವಂತೆ, ಬಸವೇಶ್ವರ ವೃತ್ತದ ಬಳಿ ಮತ್ತಿತರ ಮುಖ್ಯ ರಸ್ತೆಗಳ ಅಕ್ಕಪಕ್ಕದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವಂತೆ, ಬಸ್ ನಿಲ್ದಾಣಕ್ಕೆ ತೆರಳುವ ಬಸ್ಗಳ ಸಂಚಾರವನ್ನು ಏಕಮುಖ ರಸ್ತೆಯನ್ನಾಗಿಸುವಂತೆ, ಕಾಲೇಜು ಮತ್ತಿತರ ಕಡೆಗಳಲ್ಲಿ ಪುಂಡರ ಹಾವಳಿ ತಡೆಗಟ್ಟುವಂತೆ ಹಾಗೂ ವೇಗವಾಗಿ ಚಲಿಸುವ ವಾಹನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದರು.
ಎಸ್ಐ ಪುನೀತ್ ಮಾತನಾಡಿ, ಸಾರ್ವಜನಿಕರು ಕಾನೂನು ಪಾಲಿಸುವ ಮೂಲಕ ಸಮಸ್ಯೆ ಆಗದಂತೆ ನಿಗಾವಹಿಸುವಂತೆಹಾಗೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದರು. ಎಎಸ್ಐ ಲಕ್ಷ್ಮಿನಾರಾಯಣ, ಸಿಬ್ಬಂದಿ ಬೀರೇಗೌಡ, ಮಂಜುನಾಥ, ಶಾಂತರಾಜ್, ಮೀರಾಬಿ, ನಯೀಂ, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಇದ್ದರು.