ಮಕ್ಕಳನ್ನು ಶಾಲೆಗೆ ಕರೆತರಲು ನಿರ್ಧಾರ
ಟಿ. ನರಸೀಪುರ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರುತಂದು, ವಿಶೇಷ ಮಕ್ಕಳಿಗೆ ಅಂಗವಿಕಲರ ಮೀಸಲು ಹಣದಲ್ಲಿ ವೈದ್ಯ ನೆರವು ನೀಡಲು ತಾಪಂನಲ್ಲಿ ನಡೆದ ತಾಲೂಕು ಕಾವಲು ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ತಾಪಂ ಸಭಾಂಗಣದಲ್ಲಿ ನಡೆದ ಕಾವಲು ಸಮಿತಿ ಸಭೆಯಲ್ಲಿ ಶೈಕ್ಷಣಿಕ ಸೌಲಭ್ಯದಿಂದ ವಂಚಿತರಾದ ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸಿಕೊಡುವುದು ಹಾಗೂ ವಿಶೇಷ ಅಗತ್ಯವುಳ್ಳ ಅಂಗವಿಕಲರಿಗೆ ಆರೋಗ್ಯ ನೆರವು ನೀಡಲು ಚರ್ಚೆ ನಡೆಸಲಾಯಿತು. ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಸಹಭಾಗಿತ್ವವನ್ನು ಪಡೆಯುವ ಬಗ್ಗೆಯೂ ತೀರ್ಮಾನಿಸಲಾಯಿತು.
ಐಇಆರ್ಟಿ ಸಂಪನ್ಮೂಲ ವ್ಯಕ್ತಿ ಕುಪ್ಯ ಪುಟ್ಟಸ್ವಾಮಿ ಮಾತನಾಡಿ, ಸರ್ಕಾರ ಅಂಗವಿಕಲರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಶೇ.3ರ ಅನುದಾನವನ್ನು ಇಲಾಖೆಗಳಲ್ಲಿ ಬಳಕೆ ಮಾಡಿಕೊಂಡು ಆರೋಗ್ಯವನ್ನು ಕಾಪಾಡಲು ಹಾಗೂ ಅವರ ಅಭಿವೃದ್ಧಿಗೆ ಬಳಸಬಹುದು ಈ ನಿಟ್ಟಿನಲ್ಲಿ ಸ್ಪಷ್ಟ ಸೂಚನೆಯನ್ನು ಆಯಾಯ ಇಲಾಖೆಗಳ ಮುಖ್ಯಸ್ಥ ಅಧಿಕಾರಿಗಳಿಗೆ ನೀಡಬೇಕೆಂದು ತಿಳಿಸಿದರು.
ಶಿಕ್ಷಣ ಸಂಯೋಜಕ ವೀರಭದ್ರಯ್ಯ ಮಾತನಾಡಿ, ಕಳೆದ ಮೇ ಮಾಹೆಯಲ್ಲಿ ನಡೆದ ಸಮೀಕ್ಷೆಯಂತೆ ಜಿಲ್ಲೆಯಲ್ಲಿ 1,800 ಮಕ್ಕಳು, ತಾಲೂಕಿನಲ್ಲಿ 450 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅದರಲ್ಲಿ 57 ಮಕ್ಕಳು ವಲಸೆ ಹೋಗಿದ್ದಾರೆ. ಇನ್ನುಳಿದ ಮಕ್ಕಳನ್ನು ಶಾಲೆಗೆ ಕರೆತರಲಾಗುವುದು. ಇವರಿಗೆ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳಲ್ಲಿ ವಾಸ್ತವ್ಯಕ್ಕೆ ಪ್ರವೇಶ ನೀಡಬೇಕು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಹಭಾಗಿತ್ವವನ್ನು ನೀಡಬೇಕೆಂದು ತಿಳಿಸಿದರು.
ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜೆ. ತಿಮ್ಮೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಸಿಡಿಪಿಒ ಬಿ.ಎನ್. ಬಸವರಾಜು, ಬಿಆರ್ಸಿ ಕೃಷ್ಣಪ್ಪ, ಸರ್ಕಾರಿ ನೌಕರರ ಸಂಘದ ಸಮಾಜ ಕಲ್ಯಾಣಾಧಿಕಾರಿ ಸಿದ್ದರಾಜು, ಬಿಸಿಎಂ ವಿಸ್ತರಣಾಧಿಕಾರಿ ವಿಶ್ವೇಶ್ವರಮೂರ್ತಿ, ಅಧ್ಯಕ್ಷ ಎಂ.ವಿ. ಶಿವಶಂಕರಮೂರ್ತಿ, ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಗಂಗಾಧರ, ಸಿಆರ್ಪಿ ಸೋಸಲೆ ನಾಗೇಶ್, ಶಿವರುದ್ರಸ್ವಾಮಿ, ಬಿಆರ್ಪಿ ಬಸವರಾಜು, ಪಪಂ ಯೋಜನಾಧಿಕಾರಿ ಕೆಂಪರಾಜು, ಸಮುದಾಯ ಸಂಘಟಕ ಮಹದೇವು, ವಿಕಲಚೇತನರ ಸಂಯೋಜಕ ದಿನೇಶ್ ಇದ್ದರು.