ಬಾಲಕ ತಿಮ್ಮಣ್ಣನ ಸುರಕ್ಷಿತ ವಾಪಸಿಗೆ ಪ್ರಾರ್ಥನೆ
ಕ.ಪ್ರ. ವಾರ್ತೆ, ಮೈಸೂರು, ಆ.4
ಬಾಗಲಕೋಟೆ ಜಿಲ್ಲೆ ಸೂಳಿಕೇರಿ ಬಳಿ ಕೊಳವೆ ಬಾವಿಯಲ್ಲಿ ಬಿದ್ದು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವ ಬಾಲಕ ತಿಮ್ಮಣ್ಣ ಸುರಕ್ಷಿತವಾಗಿ ಬರಲೆಂದು ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ನಗರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬಿಜೆಪಿ ನರಸಿಂಹರಾಜ ಕ್ಷೇತ್ರದ ಪದಾಧಿಕಾರಿಗಳು ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಈಡುಕಾಯಿ ಒಡೆದು ಪ್ರಾರ್ಥಿಸಿದರು. ರಾಜ್ಯದಲ್ಲಿ ತೆರೆದ ಎಲ್ಲ ಕೊಳವೆ ಬಾವಿಗಳನ್ನೂ ರಾಜ್ಯ ಸರ್ಕಾರ ಕೂಡಲೆ ಮುಚ್ಚಿಸಿ, ಮುಂದಾಗುವ ಅನಾಹುತ ತಪ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಎನ್.ಆರ್. ಕ್ಷೇತ್ರದ ಅಧ್ಯಕ್ಷ ಆನಂದ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ. ಮಂಜುನಾಥ್, ರಾಜೇಂದ್ರ, ವೆಂಕಟೇಶ್, ಬ್ರಹ್ಮಾಚಾರ್, ನಾಗೇಶ್, ರಾಜು, ಪ್ರಕಾಶ್, ಪಿ. ಶಿವನಾಂದರಾವ್, ಮಧು, ಜೋಗಿ ಮಂಜು ಇದ್ದರು. ಸಂತ ಫಿಲೋಮಿನಾ ಚರ್ಚ್ನಲ್ಲಿ ಪಾದ್ರಿ ವಿಲಿಯಮ್ಸ್ ಮೇಣದ ಬತ್ತಿ ಹಚ್ಚಿ ಬಾಲಕ ತಿಮ್ಮಪ್ಪ ಜೀವಂತವಾಗಿ ಬರಲಿ ಎಂದು ಬೇಡಿದರು. ಈ ವೇಳೆ ರೋಟರ್ಯಾಕ್ಟ್ ಈಸ್ಟ್ ಕ್ಲಬ್ನ ಉಪಾಧ್ಯಕ್ಷ ಕಿರಣ್ಕುಮಾರ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್, ಬಿ.ರಾಘವೇಂದ್ರ, ರಾಜೇಶ್, ಜೋಗಿ ಮಂಜು, ಆನಂದ್ ಇದ್ದರು.