ಗ್ರಾಮಾಭಿವೃದ್ಧಿ ಚಟುವಟಿಕೇಲಿಪಾಲ್ಗೊಳ್ಳಲು ಕಿವಿಮಾತು
ಸಾಲಿಗ್ರಾಮ: ಮಹಿಳೆಯರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳಬೇಕೆಂದು ಗ್ರಾಪಂ ಮಾಜಿ ಸದಸ್ಯ ಬಲರಾಮ್ ಹೇಳಿದರು.
ಕೆ.ಆರ್. ನಗರ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಪ್ರತಿನಿಧಿಗಳಿಗೆ ದಾಖಾಲಾತಿ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ಕುಟುಂಬದಲ್ಲಿ ತಮ್ಮ ಆರ್ಥಿಕ ಮಟ್ಟವನ್ನು ಅರಿತು ತಮ್ಮ ಜೀವನದ ಖರ್ಚು ವೆಚ್ಚಗಳನ್ನು ಮಾಡಬೇಕು. ಮನೆ ಮತ್ತು ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಇದೇ ವೇಳೆ ಆರಂಭಗೊಂಡಿರುವ ನೂತನ ಸಂಘಗಳ ಪ್ರತಿನಿಧಿಗಳಿಗೆ ದಾಖಲಾತಿ ಪುಸ್ತಕ ವಿತರಿಸಲಾಯಿತು.
'ಉದ್ಯೋಗ ಅಧರಿತ ಶಿಕ್ಷಣ ಇಂದಿನ ಅಗತ್ಯ'
ರಾವಂದೂರು: ಭಾರತದಲ್ಲಿ ಉದ್ಯೋಗಕ್ಕೆ ಅಗತ್ಯವಾದ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಹೆಚ್ಚಿಸಬೇಕಿದೆ ಎಂದು ಮೈಸೂರು ಉದ್ಯೋಗ ನೋಂದಣಿ ಅಧಿಕಾರಿ ವಿಶ್ವನಾಥ್ ಭರಣಿ ಹೇಳಿದರು. ಪಟ್ಟಣದ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗ್ರಾಮೀಣ ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ದೊರಕದೆ ತಮಗೆ ಪೂರಕವಾದ ಕೋರ್ಸ್ಗಳನ್ನು ಆಯ್ದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅಗತ್ಯವಾದ ವೃತ್ತಿ ಕೌಶಲ್ಯಗಳು, ಸೂಕ್ತ ಕೋರ್ಸ್ಗಳ ಆಯ್ಕೆ ಮುಂತಾದವುಗಳ ಬಗ್ಗೆ ವಿವರಣೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಫೆ. 8 ಮತ್ತು 9 ರಂದು ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಂಡಿದ್ದು, ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು.