ದೇಶದ ಪ್ರಗತಿಗೆ ಯುವಶಕ್ತಿ ಅವಶ್ಯ: ಜಯಪ್ರಕಾಶ್ಹೆಗ್ಡೆ
ಮೈಸೂರು: ಭಾರತದಂತಹ ಪ್ರಗತಿಶೀಲ ರಾಷ್ಟ್ರಗಳು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಬೇಕೆಂದರೆ ಯುವಜನರ ಪಾತ್ರ ಅತ್ಯಗತ್ಯ, ಅವರೇ ರಾಷ್ಟ್ರ ನಿರ್ಮಾತೃಗಳು ಎಂದು ಚಿಕ್ಕಮಗಳೂರು- ಉಡುಪಿ ಸಂಸದ ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.
ನಗರದ ಸೈಲೆಂಟ್ ಶೋರ್ಸ್ನಲ್ಲಿ ರೊಟೇಷಿಯಾ-2014 ಅಂಗವಾಗಿ ಆಯೋಜಿಸಿದ್ದ 'ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ' ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಸಂಸದರು ಹೇಗೆ ಆಯ್ಕೆಯಾಗುತ್ತಾರೆ. ಅವರ ಪಾತ್ರವೇನು, ಸ್ಥಾಯಿ ಸಮಿತಿಗಳ ನಿಜವಾದ ಕರ್ತವ್ಯವೇನು... ಜನಪ್ರತಿನಿಧಿಗಳಾದವರಿಗೆ ಇರುವ ಮುಖ್ಯ ಕರ್ತವ್ಯಗಳೇನು ಎಂಬಿತ್ಯಾದಿ ಕುರಿತು ಮಾಹಿತಿ ನೀಡಿದರು. ಸಿಂಗಾಪುರ, ಮಲೇಷಿಯಾ, ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್, ಆಫ್ಘಾನಿಸ್ತಾನ್ ದೇಶಗಳಿಂದ ಸುಮಾರು 2,500 ಪ್ರತಿನಿಧಿಗಳು ಭಾಗವಹಿಸಿದ್ದರು.
ಇಂದಿನಿಂದ ಕುಂದೂರಮ್ಮದೇವಿ ಪುನರ್ಪ್ರತಿಷ್ಠಾಪನೆ
ಮಳವಳ್ಳಿ: ತಾಲೂಕಿನ ಶ್ರೀಕ್ಷೇತ್ರ ಕುಂದೂರು ಬೆಟ್ಟದಲ್ಲಿ ಫೆ. 2 ರಿಂದ 4ರವರೆಗೆ ಕುಂದೂರಮ್ಮದೇವಿ ಪುನರ್ಪ್ರತಿಷ್ಠಾಪನ ಹಾಗೂ ಕುಂಬಾಭಿಷೇಕ ಮಹೋತ್ಸವ ಜರುಗಲಿದೆ. ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೆ ಪೂಜೆ, ಹೋಮ, ಕಲಶ ಸ್ಥಾಪನೆ, ಜಪಪರಾಯಣ, ನವಗ್ರಹ ಪೂಜೆ ನಡೆಯಲಿದೆ. ಸೋಮವಾರ ಬೆಳಗ್ಗೆ ಪೂಜೆ, ಹೋಮ, ಕಲಶ ಸ್ಥಾಪನೆ, ಇದ್ದು, ಸಂಜೆ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಕಾಲಭೈರವೇಶ್ವರ ಬಸಪ್ಪದೇವರ ಮೆರವಣಿಗೆ ಇರುತ್ತದೆ. ಮಂಗಳವಾರ ಬೆಳಗ್ಗೆ ಜಪಪರಾಯಣ, ಮೃತಿಕಾ ದೇವರ ಕಳಾ ಹೋಮ, ಪೂರ್ಣ ಕುಂಬಾಭಿಷೇಕ ಮಹಾ ಮಂಗಳಾರತಿ ಏರ್ಪಡಿಸಲಾಗಿದೆ. 11.30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀಕ್ಷೇತ್ರ ಕುಂದೂರು ಬೆಟ್ಟ ರಸಸಿದ್ದೇಶ್ವರ ಮಠದ ನಂಜುಂಡಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ.