ಪಡಿತರ ವಿತರಣೆಯಲ್ಲಿ ಲೋಪ:ಎಪ್ಪತ್ತೊಂದು ಪ್ರಕರಣ ದಾಖಲು
ಮೈಸೂರು: ಪಡಿತರ ವಿತರಣೆಯಲ್ಲಿ ಲೋಪ, ಅಕ್ರಮ ದಾಸ್ತಾನು, ಅಕ್ರಮ ಮಾರಾಟ ಸೇರಿದಂತೆ ರಾಜ್ಯದಲ್ಲಿ ಒಟ್ಟು 71 ಪ್ರಕರಣಗಳನ್ನು ದಾಖಲಿಸಿರುವುದಾಗಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಆಯುಕ್ತ ಹರ್ಷಗುಪ್ತ ತಿಳಿಸಿದರು. ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಶನಿವಾರ ಚಾಮರಾಜಪುರಂ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ಪಡಿತರ ಖಾತರಿ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಹತ್ತಕ್ಕೂ ಹೆಚ್ಚು ಮಂದಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಇನ್ಸ್ಪೆಕ್ಟರ್ಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ. ಪಡಿತರ ವಿತರಣಾ ಕೇಂದ್ರಗಳಲ್ಲಿ ಗ್ರಾಹಕರನ್ನು ದಾರಿತಪ್ಪಿಸುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪಡಿತರ ಖಾತರಿ ಜಾರಿಗೆ ತರಲಾಗಿದೆ. ಅಲ್ಲದೆ ವಿಚಕ್ಷಣಾ ಸಮಿತಿ ರಚಿಸಿ ಐದು ಮಂದಿ ಪಡಿತರದಾರರನ್ನು ಸದಸ್ಯರನ್ನಾಗಿ ಮಾಡಲಾಗುವುದು ಎಂದರು.