ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ
ಹುಣಸೂರು: ವಿದ್ಯಾರ್ಥಿಗಳು ಪೋಲಿಸ್ ಇಲಾಖೆ ಅನುಮತಿ ಪಡೆಯದೆ ಏಕಾಏಕಿ ರಸ್ತೆ ತಡೆ ನಡೆಸಿ, ಸಾರ್ವಜನಿಕರ ಕೆಲಸ- ಕಾರ್ಯಕ್ಕೆ ಅಡ್ಡಿಯುಂಟು ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದು ಎಂದು ಹುಣಸೂರು ಗ್ರಾಮಾಂತರ ಪೋಲಿಸ್ ಠಾಣೆ ಎಸ್ಐ ರಾಘವೇಂದ್ರಗೌಡ ಎಚ್ಚರಿಕೆ ನೀಡಿದರು. ತಾಲೂಕಿನ ಹನಗೋಡು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಸ್ತೆ ತಡೆ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಕುರಿತು ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಮೇಲೆ ಒಮ್ಮೆ ಪೊಲೀಸ್ ಇಲಾಖೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾದರೆ ಮುಂದಿನ ವ್ಯಾಸಂಗ ಹಾಗೂ ನೌಕರಿಗೆ ತೊಡಕಾಗುತ್ತದೆ ಎಂದರು. ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಜಯಮ್ಮ, ಉಪನ್ಯಾಸಕರಾದ ಜನಾರ್ಧನ್, ಶ್ರೀನಿವಾಸ್, ದಾ.ರಾ. ಮಹೇಶ್, ಎಚ್.ಬಿ. ಮಧು ಇದ್ದರು.
ಸರ್ದಾರ್ ಪ್ರತಿಮೆಗಾಗಿ ಬಿಜೆಪಿಯಿಂದ ಸಾಮಗ್ರಿ ಸಂಗ್ರಹ
ಹುಣಸೂರು: ಹನಗೋಡು ಹೋಬಳಿ ನೇರಳಕುಪ್ಪೆ ಗ್ರಾಮದ ಲಕ್ಷ್ಮೀದೇವಿ ದೇವಾಲಯದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಎಚ್.ಎನ್. ಮಂಜುನಾಥ್ ನೇತೃತ್ವದಲ್ಲಿ ಗುಜರಾತ್ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ದಾರ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗೆ ನೇರಳಕುಪ್ಪೆ ಗ್ರಾಪಂ ವ್ಯಾಪ್ತಿಯಿಂದ 2 ಕೆಜಿ ಕಬ್ಬಿಣ ಹಾಗೂ ಒಂದು ಸೀಸೆಯಲ್ಲಿ ಮಣ್ಣು ತುಂಬಿ, ಒಂದು ವಸ್ತ್ರದಲ್ಲಿ ಸಹಿ ಮಾಡಿ ಕಳುಹಿಸಲಾಯಿತು. ಪಕ್ಷದ ವತಿಯಿಂದ ಮನೆ ಮನೆಗೆ ಬಿಜೆಪಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ತಾಲೂಕು ಬಿಜೆಪಿ ಅಧ್ಯಕ್ಷ ಎಚ್.ಎನ್. ಮಂಜುನಾಥ್, ಕಳೆದ 10 ವರ್ಷಗಳಿಂದ ಕೇಂದ್ರದ ಯುಪಿಎ ಸರ್ಕಾರ ಹಲವಾರು ಹಗರಣಗಳಲ್ಲಿ ಸಿಲುಕಿಕೊಂಡು ಭ್ರಷ್ಟ ಆಡಳಿತ ನೀಡಿದೆ. ಅಲ್ಲದೆ ದೇಶದಲ್ಲಿ ಭ್ರಷ್ಟಚಾರ ವ್ಯಾಪಕವಾಗಿದ್ದು, ಇದನ್ನು ಹೋಗಲಾಡಿಲು ನರೇಂದ್ರ ಮೋದಿ ಅವರ ನೇತೃತ್ವದ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಸಾಧನೆಗಳನ್ನು ಜನರಿಗೆ ತಿಳಿಸಲು ಪಕ್ಷ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು