ಹುದ್ದೆ ಬಿಟ್ಟುಕೊಡದಿರಲು ಜಿಎಂ ಹುನ್ನಾರ: ಆರೋಪ
ಮೈಸೂರು: ದಿ ಮೈಸೂರು ಮರ್ಚೆಂಟ್ಸ್ ಕೋ- ಆಪರೇಟಿವ್ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪರಾಗಿರುವ ಸಿ. ಏಕಾಂಬರಂ ನಾಯ್ಡು ಅವರ ಅವಧಿ ಮುಗಿದಿದ್ದರೂ ಗುತ್ತಿಗೆ ಆಧಾರದಲ್ಲಿ ಮುಂದುವರೆಯುವ ಹುನ್ನಾರದಿಂದ ಬೈಲಾ ಉಲ್ಲಂಘಿಸುತ್ತಿದ್ದಾರೆ ಎಂದು ಬ್ಯಾಂಕ್ ನಿರ್ದೇಶಕ, ಪಾಲಿಕೆ ಮಾಜಿ ಸದಸ್ಯ ಎ. ಸಿದ್ದಯ್ಯ ಆರೋಪಿಸಿದ್ದಾರೆ.
ಪ್ರಸ್ತುತ ಬ್ಯಾಂಕ್ ವಹಿವಾಟು ಎರಡೂವರೆ ಸಾವಿರ ಕೋಟಿ ಮೀರಿದೆ. ಇಂತಹ ಸಂಸ್ಥೆಗೆ 2010ರಲ್ಲಿ ಏಕಾಂಬರಂ ಕಪ್ಪು ಚುಕ್ಕೆ ತಂದರು. ಅದರ ಫಲವಾಗಿ ಆರ್‌ಬಿಐ ರು. 5 ಲಕ್ಷ ದಂಡ ವಿಧಿಸಿತು. ಅಂದು ನಿರ್ದೇಶಕರೆಲ್ಲ ಸೇರಿ ಆ ಹಣ ಕಟ್ಟಿದ್ದೆವು. ಇಷ್ಟೆಲ್ಲಾ ಅವಾಂತರಕ್ಕೆ ಕಾರಣರಾದ ಏಕಾಂಬರಂ ಮುಂದುವರೆಯಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಆಗ್ರಹಿಸಿದರು. ಈ ಸಂಬಂಧ ಫೆ. 3 ರಂದು ತುರ್ತು ಸಭೆ ಕರೆಯಲಾಗಿದ್ದು, ಅಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.