ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕುಡಿಯುವ ನೀರಿನ ಸಮಸ್ಯೆ

Rashmi Kasaragodu
Updated On : 3 Feb 2014, 12:54 pm

ಮೈಸೂರು ನಗರಪಾಲಿಕೆಯ ನೀರು ಸರಬರಾಜು ಮಂಡಳಿ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ವರ್ತಿಸುತ್ತಿದೆ. ನಗರದ 26ನೇ ವಾರ್ಡ್ನ ಹೆಬ್ಬಾಳ್ನ ಮೊದಲನೆ ಹಂತಕ್ಕೆ ನೀರು ಸರಬರಾಜಿನಲ್ಲಿ ಭಾರಿ ತಾರತಮ್ಯ ಮಾಡುತ್ತಿದೆ. ಸುತ್ತಮುತ್ತಲಿನ ಬಡಾವಣೆಗಳಿಗೆ ದಿನದ 24 ಗಂಟೆ ನೀರು ಸರಬರಾಜು ಮಾಡುತ್ತಾರೆ. ಆದರೆ ಈ ಬಡಾವಣೆಗೆ ಮಾತ್ರ ಬೆಳಗಿನ ಜಾವ 4 ರಿಂದ 8.30 ರವರೆಗೆ ಮಾತ್ರ ನೀರು ಬಿಡುತ್ತಾರೆ.  ಕೆಲವೊಮ್ಮೆ 2 ದಿನಗಳಾದರೂ ನೀರು ಬಿಡುವುದಿಲ್ಲ. ಹಾಗೆಯೇ ಇಲ್ಲಿ ಮನೆ ಕಟ್ಟುವವರು ಗೋಳು ಕೇಳುವವರಿಲ್ಲ. 2-3 ದಿನಗಳು ನೀರು ಬರದಿದ್ದರೆ, ಟ್ಯಾಂಕರ್ ಮೊರೆ ಹೋಗಬೇಕಾಗುತ್ತದೆ. ಈ ಬಡಾವಣೆಯಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಆದ್ದರಿಂದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಕ್ರಮ ಕೈಗೊಳಳ್ಳಿ.
  ಎಲ್.ಜಿ. ಜಯರಾಮ್, ಹೆಬ್ಬಾಳ್, ಮೊದಲನೇ ಹಂತ



ಬೋರ್ವೆಲ್ ದುರಸ್ತಿ ಪಡಿಸಿ
ಪಿರಿಯಾಪಟ್ಟಣದ ಹೃದಯ ಭಾಗದಲ್ಲಿರುವ ಕೆ. ವೆಂಕಟೇಶ್ ಮಾರುಕಟ್ಟೆ ಪಕ್ಕದ ಆಟೋ ನಿಲ್ದಾಣ ಬಳಿ ಬೊರ್ವೆಲ್ ಇದ್ದು, ರಸ್ತೆ ಕಾಮಗಾರಿ ವೇಳೆ ರಸ್ತೆಯನ್ನು ಸಮಮಾಡುವ ಉದ್ದೇಶದಿಂದ ಮಣ್ಣನ್ನು ಹಾಕಲಾಗಿದ್ದು ಅದರಿಂದಾಗಿ ಬೋರ್ವೆಲ್ ನೆಲಮಟ್ಟಕ್ಕೆ ಹೂಳಲ್ಪಟ್ಟಿದೆ. ಹೂ ಮಾರಾಟಗಾರರು, ಆಟೋ ಚಾಲಕರು, ವರ್ತಕರು ಹಾಗೂ ಸಂತೆಗೆ ಬರುವ ಸಾರ್ವಜನಿಕರ ನೀರಿನ ಬವಣೆ ನೀಗಿಸುತ್ತಿದ್ದದ್ದು ಈ ಬೋರ್ವೆಲ್ನಿಂದ. ಜನರು ನೀರು ಪಡೆಯಲು ಪರದಾಡುವ ಸ್ಥಿತಿ ನಿರ್ಮಾವಾಗಿದೆ. ಬೋರ್ವೆಲ್ ಕೆಳಭಾಗದಲ್ಲಿದ್ದು ಕೊಳಚೆ ನಿರ್ಮಾಣವಾಗಿದ್ದು, ಕೊಳಚೆ ನೀರು ಬೋರ್ವೆಲ್ಗೆ ಸೇರುತ್ತಿರುವ ಸಂಶಯವಿದೆ. ಬೋರ್ವೆಲ್ನಿಂದ ನೀರನ್ನು ಕನಿಷ್ಠಪಕ್ಷ ಲೋಟ, ಬಾಟಲ್ಗಳಿಂದಲು ಹಿಡಿಯಲು ಸಾಧ್ಯವಾಗುತ್ತಿಲ್ಲ ಸಂಬಂಧಪಟ್ಟವರು ಇತ್ತ ಗಮನಹರಿಸಿ ಬೋರ್ವೆಲ್ ಸೌಲಭ್ಯ ಹಿಂದಿನಂತೆ ಕಲ್ಪಿಸಬೇಕಿದೆ.
   ಹರೀಶ್, ಶೀತಲ್ ಸ್ಟೋರ್, ಪಿರಿಯಾಪಟ್ಟಣ.



ಫಲಾನುಭವಿಗಳಿಗೆ ಸಹಾಯಧನ ನೀಡಿ
ಹಿಂದಿನ ಬಿಜೆಪಿ ಸರ್ಕಾರವು ವಾಜಪೇಯಿ 2012-13 ನಮ್ಮ ಮನೆ ಯೋಜನೆಯನ್ನು ಪ್ರಾರಂಭಿಸಿ, ಈ ಯೋಜನೆಯಡಿಯಲ್ಲಿ ಹೆಂಚಿನ ಸ್ವಂತ ಮನೆಯನ್ನು ಹೊಂದಿರುವ ಬಡವರಿಗೆ ಕಲ್ನಾರು ಶೀಟಿನ ಸೂರನ್ನು ನಿರ್ಮಿಸಿಕೊಳ್ಳುವ ಸಲುವಾಗಿ ಸಹಾಯಧನವನ್ನು ನೀಡಲು, ಮನೆ ಮನೆ ಭೇಟಿ ನೀಡಿ ತಪಾಸಣೆ ನಡೆಸಿ, ಫಲಾನುಭವಿಗಳನ್ನು ಆಯ್ಕೆ ಮಾಡಿತ್ತು. ಆದರೆ ಇಂದಿನ ಸರ್ಕಾರವು ಸದರಿ ಯೋಜನೆಯನ್ನು ಸ್ಥಗಿತಗೊಳಿಸಿದೆ. ಈ ಯೋಜನೆಯಡಿ ಆಯ್ಕೆಯಾಗಿದ್ದ ಫಲಾನುಭವಿಗಳು ಸಹಾಯಧನ ತೊಂದರೆ ಅನುಭವಿಸವಂತಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಸತಿ ಸಚಿವ ಅಂಬರೀಷ್ ಹಾಗೂ ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ಫಲಾನುಭವಿಗಳಿಗೆ ಕೂಡಲೆ ಸಹಾಯಧನ ಬಿಡುಗಡೆ ಮಾಡುವಂತೆ ಆಗ್ರಹ.
   ಅಸ್ಲಂ ಷರೀಫ್, ಅಧ್ಯಕ್ಷರು, ಎನ್.ಆರ್. ಬ್ಲಾಕ್ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗ



ಆನೆ ದಾಳಿ ತಪ್ಪಿಸಿ
ನಾಡಿನ ನಾನಾ ಕಡೆಗಳಲ್ಲಿ ಆನೆಗಳ ಹಿಂಡು ಪದೇ ಪದೇ ಕಾಡಿನಿಂದ ನಾಡಿಗೆ ಲಗ್ಗೆ ಹಾಕುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದರಿಂದ ಅನೇಕ ಕಡೆಗಳಲ್ಲಿ ರೈತರು ಕಂಗಾಗಲಾಗಿದ್ದಾರೆ. ಕೆಲವು ಕಡೆ ಅವು ಜನರನ್ನೇ ತುಳಿದೊ, ಮರಕ್ಕೆ ಅಪ್ಪಳಿಸಿಯೋ ಕೊಂದು ಹಾಕಿವೆ. ಈ ಸಮಸ್ಯೆಗಳಿಗೆ ಗಂಭೀರ ಪರಿಹಾರ ತುರ್ತಾಗಿ ಆಗಲೇಬೇಕಾದ ಅನಿವಾರ್ಯತೆ ಇದೆ. ಕಾಡಿನ ತುಂಬ ಆನೆಗಳು ತಿನ್ನುವ ಗಿಡಮರಗಳನ್ನು ಬೆಳೆಸಬೇಕು. ಬಿದಿರು, ಅಗಸೆ, ನುಗ್ಗೆ, ಸುಬಾಬುಲ್ಲು, ಹಾಲುವಣ, ಕೊಣಬೇವು ಇವುಗಳು ಆನೆಗಳ ಪ್ರೀತಿಯ ಆಹಾರ. ಇವು ಕಡಿದಷ್ಟೂ ಚಿಗುರುತ್ತವೆ. ಇವುಗಳನ್ನು ಸಮೃದ್ಧವಾಗಿ ಬೆಳಸುವುದು ಅರಣ್ಯ ಇಲಾಖೆಯ ಆದ್ಯ ಕರ್ತವ್ಯ. ಕಾಡಿನ ನಾನಾ ಕಡೆಗಳಲ್ಲಿ ಕೃತಕ ಜಲ ವಸತಿಗಳ ನಿರ್ಮಾಣ ಕೂಡ ಆಗಬೇಕು. ಸರ್ಕಾರ ಆನೆಗಳ ಹಾವಳಿಯನ್ನು ತಪ್ಪಿಸಲು ಇಂತಹ ಸಹಜ ವೈಜ್ಞಾನಿಕ ಮಾರ್ಗಗಳನ್ನು ಅನುಸರಿಸಬೇಕು.
   ಡಾ. ಮಳಲಿ ವಸಂತಕುಮಾರ್, ಕಳವಾಡಿ, ಉದ್ಬೂರು ಅಂಚೆ



ಹಂದಿ ಜೋಗಿಗಳ ವಾಸ ಸ್ಥಳಾಂತರಿಸಿ
ಪಟ್ಟಣದ ಹೃದಯ ಭಾಗದಲ್ಲಿರುವ 23ನೇ ವಾರ್ಡ್ಗೆ ಸೇರಿದ ದಿ. ದೇವರಾಜ ಅರಸು ಕ್ರೀಡಾಂಗಣದ ಪಕ್ಕದಲ್ಲಿ ಹಂದಿ ಜೋಗಿಗಳಿಗೆ ಪುರಸಭೆ ವಾಸಿಸಲು ಉಚಿತವಾಗಿ ಅವಕಾಶ ಕಲ್ಪಿಸಿದೆ. ಕರೀಗೌಡರ ಬೀದಿ, ಮಾರುತಿ ಬಡಾವಣೆ ನಿವಾಸಿಗಳು ವಾಸಿಸದಂತಾಗಿದೆ ಹಾಗೂ ಈ ಬಡಾವಣೆಯ ಸುತ್ತಮುತ್ತವಿರುವ ಶಾಲಾ ಕಾಲೇಜುಗಳು ಹಾಸ್ಟೆಲ್ಗಳಿಗೂ ಭಾರೀ ರಂಪ ಮಾಡುತ್ತಿವೆ. ಇಷ್ಟೆಲ್ಲ ನಡೆಯುತ್ತಿದ್ದರೂ ರಾಜಕೀಯ ಪ್ರಭಾವಕ್ಕೆ ಮಣೆ ಹಾಕಿರುವ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ನಿವಾಸಿಗಳ ಮನವಿಗೆ ಸ್ಪಂದಿಸದೆ ಜನತೆ ಬವಣೆ ಪಡುವಂತಾಗಿದ್ದು. ಹಂದಿ ಜೋಗಿಗಳ ವಾಸ ಸ್ಥಾನವನ್ನು ಸ್ಥಳಾಂತರಿಸಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಪುರಸಭೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಚ್ಚರಿಕೆ.
   ಪಾಂಡುಕುಮಾರ್, ಜಿಲ್ಲಾಧ್ಯಕ್ಷ, ಕರ್ನಾಟಕ ಪ್ರಜಾ ವೇದಿಕೆ, ಹುಣಸೂರು



ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ
ರಾಜ್ಯದಲ್ಲಿ ಸಾರ್ವಜನಿಕ ವಲಯದಲ್ಲಿ ಹೊರ ರಾಜ್ಯದ, ಅನ್ಯಭಾಷಿಕರ ಅಟ್ಟಹಾಸ ಅಡೆತಡೆ ಇಲ್ಲದೆ ನಡೆಯುತ್ತಿದೆ. ಅದರಲ್ಲೂ ನಮ್ಮ ರಾಜ್ಯ ಬ್ಯಾಂಕ್ಗಳಲ್ಲಿರುವ ಸಿಬ್ಬಂದಿ ಬಹುತೇಕರು ಹೊರರಾಜ್ಯದವರೇ ಆಗಿದ್ದಾರೆ. ಜನ  ಸಾಮಾನ್ಯರು ಅವರೊಂದಿಗೆ ವ್ಯವಹರಿಸುವುದು ದುಸ್ತರವಾಗಿದೆ. ಸರ್ಕಾರದ ಕಾರ್ಯಾಲಯಗಳಲ್ಲಿರುವ ವ್ಯವಹಾರ ಜನತೆಯ ಮಾತೃಭಾಷೆಯಲ್ಲಿಯೇ ನಡೆಯಬೇಕು. ಅದಕ್ಕಾಗಿ ಆಡಳಿತ ಶಾಖೆಗೆ ಅಧಿಕಾರಿಗಳನ್ನು ಆಯಾ ಪ್ರದೇಶಗಳಿಂದಲೇ ಆರಿಸಬೇಕು. ಆ ಅಧಿಕಾರಿಗಳಿಗೆ ಮಾತೃಭಾಷೆಯಲ್ಲಿ ಚೆನ್ನಾಗಿ ಶಿಕ್ಷಣ ದೊರೆತಿರಬೇಕು ಎಂಬುದು ರಷ್ಯಾದ ರಾಜಕೀಯ ನೇತಾರನಾದ ಲೆನಿನ ಅಭಿಪ್ರಾಯ. ಆದರೆ ಭಾರತ ದೇಶದ ರಾಜಕಾರಣಿಗಳು ಈ ವಿಚಾರದತ್ತ ಚಿಂತಿಸದೆ ಇರುವುದು ದುರಂತವೇ ಸರಿ. ಇನ್ನು ಮುಂದಾದರೂ ಬ್ಯಾಂಕ್ ಮೊದಲಾದ ಸರ್ಕಾರದ ಕಾರ್ಯಾಲಯಗಳಿಗೆ ಆಯಾ ಪ್ರಾದೇಶಿಕ ಭಾಷೆಯಲ್ಲಿಯೇ ಪರೀಕ್ಷೆ ನಡೆಸಿ, ಸ್ಥಳೀಯ ರಿಗೆ ಹೆಚ್ಚಿನ ಉದ್ಯೋಗವಕಾಶ ಕಲ್ಪಿಸಿಕೊಡುವಂತೆ ಕೋರಿಕೆ.
   ಮಂಜು ಅಮ್ಮನಪುರ, ಪ್ರಧಾನ ಕಾರ್ಯದರ್ಶಿ, ದಲಿತ ಸಾಹಿತ್ಯ ಅಕಾಡೆಮಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement