ಗುತ್ತಿಗೆ ಪೌರ ಕಾರ್ಮಿಕರ ವಜಾ ಖಂಡಿಸಿ ಪ್ರತಿಭಟನೆ
ಪಿರಿಯಾಪಟ್ಟಣ: ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಕಳೆದ 10 ವರ್ಷಗಳಿಂದ ಸ್ವಚ್ಛತಾ ಕಾರ್ಯ ಮಾಡುತ್ತಿದ್ದ ಪೌರ ಕಾರ್ಮಿಕರನ್ನು ಗುತ್ತಿಗೆದಾರರು ಏಕಾಏಕಿ ತೆಗೆದು ಹಾಕಿರುವುದನ್ನು ಖಂಡಿಸಿ ದಸಂಸ ಕಾರ್ಯಕರ್ತರು ಪ್ರತಿಭಟಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಸಂಸ ಮುಖಂಡ ಚನ್ನಯ್ಯ ಮಾತನಾಡಿ, ನಿಲ್ದಾಣದಲ್ಲಿ 10 ವರ್ಷಗಳಿಂದ 10 ಮಂದಿ ಪೌರ ಕಾರ್ಮಿಕರು ನಿಲ್ದಾಣದ ಸ್ವಚ್ಛತಾಕಾರ್ಯ ನಿರ್ವಹಿಸುತ್ತಿದ್ದರು. ಗುತ್ತಿಗೆದಾರರು ಇವರನ್ನು ಏಕಾಏಕಿ ಕೆಲಸದಿಂದ ತೆಗೆದು ಬಿಹಾರ ಮೂಲದವರನ್ನು ಸೇರಿಸಿಕೊಂಡಿರುವುದು ಸರಿಯಲ್ಲ. ರಾಜ್ಯದವರಿಗೆ ಕೆಲಸ ಇಲ್ಲದ ಈ ಸಂದರ್ಭದಲ್ಲಿ ಹೊರ ರಾಜ್ಯದವರಿಗೆ ಕೆಲಸ ಕೊಟ್ಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕೂಡಲೇ ಪೌರ ಕಾರ್ಮಿಕರಿಗೆ ಆದ ಅನ್ಯಾಯ ಸರಿಪಡಿಸದಿದ್ದರೆ ತಾಲೂಕು ಕಚೇರಿ ಎದುರು ಪ್ರತಿಭಟಿಸುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಎಚ್.ಕೆ. ಮಹೇಶ್, ಗೋಪಾಲ್, ಸುಬ್ರಹ್ಮಣ್ಯ, ರವಿ, ಮುರುಗೇಶ್, ಹರೀಶ್, ಪೌರ ಕಾರ್ಮಿಕರಾದ ರಂಗನಾಥ್, ನಂದಕುಮಾರ, ಕೃಷ್ಣ, ಮಹೇಶ್, ಹರೀಶ್, ಕವಿತಾ, ಸುಬ್ಬಲಕ್ಷ್ಮಿ ಇದ್ದರು.