ರಾಜ್ಯದಲ್ಲಿ 12.50 ಲಕ್ಷ ಪ್ರಕರಣಗಳು ಬಾಕಿ
ಮೈಸೂರು: ರಾಜ್ಯದಲ್ಲಿ 12.50 ಲಕ್ಷ ಪ್ರಕರಣಗಳು ಬಾಕಿ ಇವೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಹೈಕೋರ್ಟ್ ನ್ಯಾಯಾಧೀಶ ಎನ್.ಕೆ. ಪಾಟೀಲ್ ಹೇಳಿದರು.
ಮೈಸೂರು ಜಿಪಂ ಸಭಾಂಗಣದಲ್ಲಿ ಬೃಹತ್ ಲೋಕ ಅದಾಲತ್ ಸಂಬಂಧಿಸಿದಂತೆ ಭಾನುವಾರ ಪೂರ್ವಭಾವಿ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಏ.12 ರಂದು ಬೃಹತ್ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಜ.6 ರಿಂದಲೆ ಎಲ್ಲ ಹಂತಗಳಲ್ಲೂ ಅಂದರೆ ಹೈಕೋರ್ಟ್, ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಬೈಠಕ್ ಆರಂಭವಾಗಿದೆ. ರಾಜ್ಯದಲ್ಲಿ 12.50 ಲಕ್ಷ ಪ್ರಕರಣಗಳಿದ್ದು, ಮೊದಲ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 95,170 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಬೆಂಗಳೂರು ನಗರದಲ್ಲಿ ಮಾತ್ರ 2.26 ಲಕ್ಷ, ಬೆಳಗಾವಿಯಲ್ಲಿ 1.50 ಲಕ್ಷ, ಮೈಸೂರಿನಲ್ಲಿ 70 ಸಾವಿರ ಪ್ರಕಣಗಳಿವೆ. ಉಳಿದ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಪ್ರಕರಣಗಳಿವೆ. ಎರಡನೇ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಜ್ಯಗಳ ಇತ್ಯರ್ಥಗೊಳಿಸುವ ಗುರಿ ಹೊಂದಲಾಗಿದೆ ಎಂದರು.
ಹಲವು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಎಲ್ಲ ರೀತಿಯ ಕ್ರಮ ವಹಿಸಲಾಗಿದ್ದು, ಸಾಧ್ಯವಾದಷ್ಟು ಎಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಚಿಂತಿಸಲಾಗಿದೆ. ಆದರೆ, ಯಾವ ಪ್ರಮಾಣದಲ್ಲಿ ಇತ್ಯರ್ಥವಾಗಲಿದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಪ್ರತಿ ಪ್ರಕರಣಗಳಲ್ಲೂ ಕಕ್ಷಿದಾರರು, ವಕೀಲರು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಹಿಸುವ ಪಾತ್ರದ ಮೇಲೆ ಪ್ರಕರಣಗಳ ಇತ್ಯರ್ಥ ನಿಂತಿದೆ ಎಂದು ಹೇಳಿದರು.
ಗ್ರಾಮ ಲೆಕ್ಕಾಧಿಕಾರಿಯಿಂದ ಜಿಲ್ಲಾಧಿಕಾರಿವರೆಗೆ ಎಲ್ಲರೂ ಶ್ರಮಿಸಿದರೆ ಮಾತ್ರ ಭೂ ವ್ಯಾಜ್ಯ ಪ್ರಕರಣಗಳನ್ನು ಪರಿಹರಿಸಬಹುದು. ಆಡಳಿತಾತ್ಮಕ ವಿಚಾರದಲ್ಲಿ ತೀರ್ಪು ನೀಡಲು ಸಾಧ್ಯವಾಗದಿರುವುದು ವಿಳಂಬಕ್ಕೆ ಕಾರಣವಾಗಿದೆ. ಹೀಗಾಗಿ, ಈ ಬಾರಿ ಕಂದಾಯ ಇಲಾಖೆಯವರು ಸಾಕಷ್ಟು ಶ್ರಮವಹಿಸಿದರೆ ಭೂವ್ಯಾಜ್ಯಗಳ ಇತ್ಯರ್ಥ ಸುಲಭವಾಗುತ್ತದೆ ಎಂದರು.
ಅರಿವು ಮೂಡಿಸಬೇಕು: ಭ್ರಷ್ಟಾಚಾರ ಸೇರಿದಂತೆ ಇತರೆ ಪ್ರಕರಣಗಳ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿದೆ. ಇದೇ ರೀತಿ ಲೋಕ ಅದಾಲತ್ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸಬೇಕು. ಗ್ರಾಪಂ, ಆರೋಗ್ಯ ಕೇಂದ್ರ, ಗ್ರಾಮ ಲೆಕ್ಕಾಧಿಕಾರಿಗಳು ಮೂಲಕ ಕರಪತ್ರ ವಿತರಿಸಿ ಜಾಗೃತಿ ಮೂಡಿಸಬೇಕಾಗಿದೆ. ಇದು ಒಬ್ಬರಿಂದ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಕೈ ಜೋಡಿಸಿದಾಗ ಮಾತ್ರ ಸಾಧ್ಯ ಎಂದರು.
ಪ್ರಸ್ತುತ ಲೋಕ ಅದಾಲತ್ ಪ್ರಕರಣಗಳ ವಿಚಾರಣೆಯು ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ ಮಾತ್ರ ನಡೆಯುತ್ತಿದೆ. ಈ ಕಾಲಾವಕಾಶ ಸಾಲದು. ಹೀಗಾಗಿ, ಮುಂಬರುವ ದಿನಗಳಲ್ಲಿ ದಿನವಿಡಿ ಲೋಕ ಅದಾಲತ್ ನಡೆಸುವ ಬಗ್ಗೆ ಚಿಂತಿಸಲಾಗುವುದು ಎಂದು ಅವರು ಹೇಳಿದರು. ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಕೆ.ಎಸ್. ಮುದಗಲ್ ಇದ್ದರು.