ಅನುದಾನ ಪೋಲಾಗದಂತೆ ಎಚ್ಚರ ವಹಿಸಿ
ಹುಣಸೂರು: ಜನಪ್ರತಿನಿಧಿಗಳು ಮಂಜೂರು ಮಾಡುವ ಯಾವುದೇ ಅಭಿವೃದ್ಧಿ ಕೆಲಸದಲ್ಲಿ ಎಂಜಿಯರುಗಳು ನಿರ್ಲಕ್ಷ್ಯವಹಿಸದೆ ಹಾಗೂ ಸರ್ಕಾರದ ಅನುದಾನ ಪೋಲಾಗದಂತೆ ಎಚ್ಚರವಹಿಸುವಂತೆ ಜಿಪಂ ಅಧ್ಯಕ್ಷ ಕೂರ್ಗಹಳ್ಳಿ ಎಂ. ಮಹದೇವು ತಾಕೀತು ಮಾಡಿದರು. ಪಟ್ಟಣದ ಜಿಪಂ ಪಂಚಾಯಿತ್ರಾಜ್ ಎಂಜಿನಿಯರ್ ಉಪವಿಭಾಗ ಕಚೇರಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ತಾಲೂಕಿನ ವಿವಿಧೆಡೆ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ ಕಳಪೆ ಕಾಮಗಾರಿಗೆ ಪ್ರೋತ್ಸಾಹ ನೀಡಿದ ಎಂಜಿನಿಯರ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಪಂ ಸದಸ್ಯರಾದ ಪಟೇಲ್ ಜವರೇಗೌಡ, ರಮೇಶ್, ಮುಖಂಡ ಚಿಕ್ಕಣ್ಣೇಗೌಡ, ಸಹಾಯಕ ಎಂಜಿನಿಯರ್ ಚೆನ್ನಕೇಶವ, ಕಿರಿಯ ಎಂಜಿಯರ್ ಉಮಶಂಕರ್, ಕಾಂತರಾಜು ಇದ್ದರು.
ಕನಕದಾಸ ವಿದ್ಯಾರ್ಥಿನಿಲಯಕ್ಕೆ ಸಹಕಾರ: ಧರ್ಮಸೇನ
ತಾಂಡವಪುರ: ಕನಕದಾಸ ವಿದ್ಯಾರ್ಥಿ ನಿಲಯದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಶಾಸಕ ಆರ್. ಧರ್ಮಸೇನ ಭರವಸೆ ನೀಡಿದರು.
ನಂಜನಗೂಡು ಪಟ್ಟಣದಲ್ಲಿರುವ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಈ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದಿರುವವರು ರಾಜಕೀಯವಾಗಿ ಸಾಮಾಜಿಕವಾಗಿ ಮುಂದೆ ಬಂದಿದ್ದಾರೆ. ಅದೇ ರೀತಿ ಇಲ್ಲಿ ಶಿಕ್ಷಣ ಪಡೆಯುವಂತಹ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸಿ ದೇಶದ ಉತ್ತಮ ಪ್ರಜೆಗಳಾಗಿ ಎಂದು ಕಿವಿಮಾತು ಹೇಳಿದರು. ಟ್ರಸ್ಟ್ನ ಅಧ್ಯಕ್ಷರಾದ ಜವರಾಯಿ, ಕಾರ್ಯದರ್ಶಿ ಎನ್.ಎಸ್. ಮಹದೇವು, ಬಿಇಒ ಪುರುಷೋತ್ತಮ್, ಪುರಸಭಾ ಸದಸ್ಯರಾದ ಸಿ.ಎಂ. ಶಂಕರ್, ಸುಂದರರಾಜು, ಪ್ರದೀಪ್, ಶ್ರೀಕಂಠು, ಇಂಡೇನ್ ಗ್ಯಾಸ್ ಮಾಲೀಕ ಸುರೇಶ್, ಬಸವೇಗೌಡ, ದೊಡ್ಡಮಾದಯ್ಯ, ಶಿಕ್ಷಣ ತಜ್ಞರಾದ ಶಶಿ ಪಾಟೀಲ್, ಶಾಲೆಯ ಮುಖ್ಯಶಿಕ್ಷಕ ಸೋಮಣ್ಣ, ಗಾಣಿಗ ಮಹದೇವು ಇದ್ದರು.