ಕಾವ್ಯ ಸೃಷ್ಟಿಗೆ ಪ್ರತಿಭೆ ಅವಶ್ಯ: ಡಾ. ಪ್ರಭುಶಂಕರ
ಮೈಸೂರು: ಯಾವುದೇ ಕಾವ್ಯ ಸೃಷ್ಟಿಗೆ ಪ್ರತಿಭೆ ಅವಶ್ಯಕ ಎಂದು ಹಿರಿಯ ವಿದ್ವಾಂಸ ಡಾ.ಪ್ರಭುಶಂಕರ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠದ ಸಂಯುಕ್ತಾಶ್ರಯದಲ್ಲಿ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಜೀವನ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಭೆಯನ್ನು ಆಗಾಧವಾಗಿ ಹೊಂದಿದ್ದ ಜಿಎಸ್ಸೆಸ್ ಅವರು, ತ.ಸು. ಶಾಮರಾಯರ ಪ್ರೋತ್ಸಾಹ ಹಾಗೂ ಕುವೆಂಪು ಅವರ ಮಾರ್ಗದರ್ಶನದಿಂದ ಉತ್ತಮ ಕಾವ್ಯ ರಚಿಸಿದರು ಎಂದರು.
ಜಿಎಸ್ಸೆಸ್ ಬದುಕು ಮತ್ತು ಬರಹ ಕುರಿತು ಮಾತನಾಡಿದ ಮೈಸೂರು ವಿವಿಯ ಪ್ರಸಾರಾಂಗ ನಿರ್ದೇಶಕ ಪ್ರೊ.ಸಿ. ನಾಗಣ್ಣ, ಮನುಷ್ಯನ ಗೊಂದಲಗಳಿಗೆ ಪರಿಹಾರ ಕಲ್ಪಿಸುವಲ್ಲಿ ಇರುವ ಏಕೈಕ ಮಾರ್ಗ ಕಾವ್ಯ. ಆಯಾಯ ಕಾಲದ ಸಂವೇದನೆಯನ್ನು ಅದು ಪ್ರತಿಬಿಂಬಿಸಲಿದೆ ಎಂದರು. ಸುಗಮ ಸಂಗೀತ ಕಲಾವಿದೆ ಎಚ್.ಆರ್.ಲೀಲಾವತಿ ಹಾಗೂ ಜೆಎಸ್ಎಸ್ ಪ್ರಕಟಣಾ ವಿಭಾಗದ ಉಪನಿರ್ದೇಶಕ ಕೆ.ಸಿ. ಶಿವಪ್ಪ, ಕಾಲೇಜು ಶಿಕ್ಷಣ ಮಂಡಳಿ ನಿರ್ದೇಶಕ ಪ್ರೊ.ಡಿ.ಟಿ. ಸುಬ್ಬಣ್ಣ ಮಾತನಾಡಿದರು.
ಕಾರ್ಯಕ್ರಮದ ನಡುವೆ ರಂಗರಾವ್ ಸ್ಮಾರಕ ಅಂಧ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿನಿಯರು ಹಾಗೂ ಕಿರಗಸೂರು ಪುರುಷೋತ್ತಮ್ ತಂಡದವರು ಜಿಎಸ್ಸೆಸ್ ಗೀತಗಳ ಗಾಯನ ನಡೆಸಿಕೊಟ್ಟರು. ಪರಿಷತ್ತಿನ ಅಧ್ಯಕ್ಷ ಎಂ.ಚಂದ್ರಶೇಖರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ವೈ.ಡಿ. ರಾಜಣ್ಣ ನಿರೂಪಿಸಿದರು.