ಕು(ರು)ಡುಗೋಲು ಪ್ರೇಮಿ
ಮೈಸೂರು: ತನ್ನ ಪ್ರೇಮ ನಿವೇದನೆ ನಿರಾಕರಿಸಿದ ಯುವತಿಗೆ ಯುವಕನೊಬ್ಬ ಕುಡುಗೋಲಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ನಗರದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಮೈಸೂರು ತಾಲೂಕು ನಗರ್ತಳ್ಳಿ ನಿವಾಸಿ ಹಾಗೂ ಮರಿಮಲ್ಲಪ್ಪ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಪವಿತ್ರಾ (ಹೆಸರು ಬದಲಿಸಲಾಗಿದೆ) ಇರಿತಕ್ಕೊಳಗಾದವರು. ನಾಗನಹಳ್ಳಿ ನಿವಾಸಿ ಸಣ್ಣಸ್ವಾಮಿ ಎಂಬವರ ಪುತ್ರ ಸ್ವಾಮಿ (23) ಕುಡುಗೋಲಿನಿಂದ ಕೊಲೆಗೆ ಯತ್ನಿಸಿದ ಆರೋಪಿ. ತನ್ನನ್ನು ಪ್ರೀತಿಸುವಂತೆ ಬಾವನ ತಂಗಿಯನ್ನು ಸ್ವಾಮಿ ಕಾಡುತ್ತಿದ್ದ. ಆದರೆ, ಯುವತಿ ಮನೆಯವರು ಬೇರೆ ಯುವಕನೊಂದಿಗೆ ವಿವಾಹ ಮಾಡಲು ನಿರ್ಧರಿಸಿದ್ದರು. ಇದರಿಂದ ರೊಚ್ಚಿಗೆದ್ದ ಸ್ವಾಮಿ, ಯುವತಿ ಸೋಮವಾರ ಕಾಲೇಜಿಗೆ ಬರುತ್ತಿದ್ದಾಗ ಹಿಂಬಾಲಿಸಿ ಮಾರ್ಗ ಮಧ್ಯೆ ಕುಡುಗೋಲಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ. ಆದರೆ, ಸ್ವಾಮಿ ಕುಡುಗೋಲು ಬೀಸುತ್ತಿದ್ದಂತೆ ಆಕೆ ತನ್ನ ಬಲಗೈ ಅಡ್ಡ ಹಿಡಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕೈಗೆ ಆಳವಾಗಿ ಗಾಯವಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಸ್ವಾಮಿಯನ್ನು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದರು. ಯುವತಿಯ ದೂರಿನ ಮೇರೆಗೆ ಸ್ವಾಮಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ನಾಳೆ ರಾಷ್ಟ್ರೀಯ ಬುಡಕಟ್ಟು ಪ್ರತಿನಿಧಿಗಳ ಭೇಟಿ
ಮೈಸೂರು: ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ಕೇಂದ್ರ ಗೃಹ ಸಚಿವಾಲಯ ಬೆಂಗಳೂರಿನಲ್ಲಿ ಆಯೋಜಿಸಿರುವ 6ನೇ ರಾಷ್ಟ್ರೀಯ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮದ ಪ್ರತಿನಿಧಿಗಳು ಫೆ.5 ರಂದು ಮೈಸೂರಿಗೆ ಆಗಮಿಸಲಿದ್ದಾರೆ. ಛತ್ತೀಸ್ಗಡ, ಒಡಿಸ್ಸಾ, ಜಾರ್ಖಂಡ್ ಹಾಗೂ ಬಿಹಾರ ರಾಜ್ಯಗಳ ಸುಮಾರು 250 ಬುಡಕಟ್ಟು ಯುವಕ, ಯುವತಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಫೆ.5 ರಂದು ಮೈಸೂರಿಗೆ ಆಗಮಿಸುವ ಈ ತಂಡವನ್ನು ಮುಕ್ತ ವಿವಿ ಆವರಣದ ಕಾವೇರಿ ಸಭಾಂಗಣದಲ್ಲಿ ಸ್ವಾಗತಿಸಿ, ಸಂವಾದ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ವಾಸು ಅಧ್ಯಕ್ಷತೆ ವಹಿಸುವರು. ಮೇಯರ್ ಎನ್.ಎಂ. ರಾಜೇಶ್ವರಿ, ಶಾಸಕರಾದ ತನ್ವೀರ್ಸೇಠ್, ಎಂ.ಕೆ. ಸೋಮಶೇಖರ್, ಜಿ.ಟಿ. ದೇವೇಗೌಡ, ಸಿ.ಎಚ್. ವಿಜಯಶಂಕರ್ ಪಾಲ್ಗೊಳ್ಳುವರು. ಬಳಿಕ ಮೈಸೂರು ಅರಮನೆ, ಮೃಗಾಲಯ, ಕೆಆರ್ಎಸ್ಗೆ ಭೇಟಿ ನೀಡುವರು ಎಂದು ಯುವಜನ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್ ತಿಳಿಸಿದ್ದಾರೆ.