ಪ್ರೊ.ಕೆ. ಭೈರವಮೂರ್ತಿಗೆ ಅಭಿನಂದನೆ
ಮೈಸೂರು: ಮಂಡ್ಯದಲ್ಲಿ ಫೆ.15 ಮತ್ತು 16 ರಂದು ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಕೆ.ಭೈರವಮೂರ್ತಿ ಅವರನ್ನು ಕರ್ನಾಟಕ ಕಾವಲುಪಡೆ ವತಿಯಿಂದ ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಭೈರವಮೂರ್ತಿ, ಅಳಿವಿನ ಅಂಚಿನಲ್ಲಿರುವ ಗ್ರಾಮೀಣ ಕಲೆಗಳ ಪುನಶ್ಚೇತನಕ್ಕೆ ಸರ್ಕಾರ ಹೊಸ ಯೋಜನೆ ರೂಪಿಸಿ ಬದ್ಧತೆಯಿಂದ ಅನುಷ್ಠಾನ ಮಾಡಬೇಕಾದ ತುರ್ತು ಅಗತ್ಯವಿದೆ. ಗಮಕಿಗಳು, ತತ್ವಪದಗಾರರು, ಹರಿಕಥಾ ವಿದ್ವಾಂಸರನ್ನು ಪ್ರೋತ್ಸಾಹಿಸುವ ರಚನಾತ್ಮಕ ಕೆಲಸ ಇನ್ನಷ್ಟು ಆಗಬೇಕಿದೆ. ಇದಕ್ಕಾಗಿ ನಗರ ಕೇಂದ್ರಿತ ಸಾಂಸ್ಕೃತಿಕ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶದತ್ತ ವಿಕೇಂದ್ರೀಕರಿಸಬೇಕಾಗಿದೆ ಎಂದರು.
ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷ ಎಂ.ಮೋಹನ್ಕುಮಾರ್ಗೌಡ, ಸಾಂಸ್ಕೃತಿಕ ಘಟಕದ ಅಧ್ಯಕ್ಷ ಟಿ. ಸತೀಶ್ ಜವರೇಗೌಡ, ಉಪಾಧ್ಯಕ್ಷ ರವಿಗೌಡ, ಕಾರ್ಯದರ್ಶಿ ರವೀಂದ್ರ ಗದ್ದಿಗೆ, ಯುವ ಕವಿ ಎಂ. ಶಿವಕುಮಾರ ಆರಾಧ್ಯ, ನೆಲದನಿ ಸಾಂಸ್ಕೃತಿಕ ವೇದಿಕೆ ಸಂಚಾಲಕ ಚಿಕ್ಕರಾಜು, ಕೆ.ಎಂ. ತುಳಸಿ, ರೇಖಾ ಇದ್ದರು.