ಬಜೆಟ್ನಲ್ಲಿ ಮೈಸೂರಿಗೆ ಕೊಡುಗೆ ನೀಡಿ
ಮೈಸೂರು: ಫೆ.14 ರಂದು ಮಂಡಿಸಲಿರುವ 2014-15ನೇ ಸಾಲಿನ ಆಯವ್ಯಯದಲ್ಲಿ ಮೈಸೂರಿನ ಅಭಿವೃದ್ಧಿ ಪೂರಕವಾದ ಅಂಶಗಳನ್ನು ಪ್ರಕಟಿಸುವಂತೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಲವು ಸಲಹೆ ನೀಡಿದೆ.
ಉದ್ಯಮಿಗಳು ಪಾಲಿಕೆಯಿಂದ ಪಡೆಯಬೇಕಾದ ರಹದಾರಿ ರದ್ದುಪಡಿಸುವುದು, ಮೈಸೂರು ನಂಜನಗೂಡು ಮಧ್ಯೆ ನಾಲ್ಕು ಪಥದ ರಸ್ತೆಗೆ ಕ್ರಮ ಕೈಗೊಳ್ಳುವುದು, ಜನಸಂಖ್ಯೆಗೆ ಅನುಗುಣವಾಗಿ ಪಾರ್ಕಿಂಗ್ ವ್ಯವಸ್ಥೆಗೆ ಅನುಕೂಲ ಮಾಡಿಕೊಡಲು 8 ಕಡೆ ಬಹುಮಹಡಿಯ ಕಟ್ಟಡಗಳನ್ನು ನಿರ್ಮಿಸುವುದು, ಇಂಟ್ರೆಸ್ಟ್ ಫ್ರೀ ಸ್ಕೀಂ ಅನ್ನು ಸಣ್ಣ ಕೈಗಾರಿಕೆಗಳು ಮತ್ತು ಹೊಟೇಲ್ ಉದ್ಯಮಿಗಳಿಗೆ ವಿಸ್ತರಿಸಿ ಹತ್ತು ವರ್ಷಗಳವರೆಗೆ ಶೇ.100 ರಷ್ಟು ಇಂಟ್ರೆಸ್ಟ್ ಫ್ರೀ ಲೋನಾಗಿ ಮಾರ್ಪಡಿಸುವಂತೆ ಒತ್ತಾಯಿಸಲಾಯಿತು.
ಮೈಸೂರು- ಬೆಂಗಳೂರು ರೇಲ್ವೆ ಜೋಡಿ ಮಾರ್ಗವನ್ನು ಶೀಘ್ರ ಮುಗಿಸುವುದು, ಮೈಸೂರಿನಲ್ಲಿ ಐಡಿಯಾ ಸೆಂಟರ್ ಸ್ಥಾಪಿಸುವುದು, ಮೈಸೂರು, ನಂಜನಗೂಡು- ಸುಲ್ತಾನ್ ಬತ್ತೇರಿ ರೇಲ್ವೆ ಸಂಪರ್ಕ ಕಲ್ಪಿಸುವುದು, ನೀರಿನ ಸಮಸ್ಯೆ ನೀಗಿಸುವುದು, ಹೊರ ರಾಜ್ಯದಿಂದ ರಾಜ್ಯಕ್ಕೆ ಬರುವ ವಾಹನಗಳ ಪ್ರವೇಶ ಶುಲ್ಕ ರದ್ದುಪಡಿಸುವುದು, ಕೈಗಾರಿಕಾ ಪ್ರಾಧಿಕಾರ ಸ್ಥಾಪನೆ ಸೇರಿದಂತೆ ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ಯೋಜನೆ ಪ್ರಕಟಿಸುವಂತೆ ಕೋರಲಾಯಿತು.
ಮೈಸೂರು ಕೈಗಾರಿಕೆಗಳ ಸಂಘ: ಮೈಸೂರು ಕೈಗಾರಿಕೆಗಳ ಸಂಘವು ಹಲವು ಬೇಡಿಕೆಗಳನ್ನು ಒತ್ತಾಯಿಸಿದ್ದು, ಕೈಗಾರಿಕಾ ಅದಾಲತ್ ನಡೆಸುವುದು, ಹೈಟೆಕ್ ಜವಳಿ ಪಾರ್ಕ್ ನಿರ್ಮಾಣ, ಜಾಗತಿಕ ಕೈಗಾರಿಕಾ ಹಾಗೂ ಸೌಲಭ್ಯ ಕೇಂದ್ರ ಸ್ಥಾಪನೆ, 4404 ಸಣ್ಣ ಕೈಗಾರಿಕೆಗಳಿಗೆ ಬಾಕಿ ಇರುವ ಸಹಾಯಧನವಾದ 205 ಕೋಟಿ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುವುದು, ಕೈಗಾರಿಕಾ ಪ್ರದೇಶದಲ್ಲಿ ಹೆಲಿಪ್ಯಾಡ್ ನಿರ್ಮಿಸುವುದು, ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿಪಡಿಸುವುದು, ಕೆಐಎಡಿಬಿ ಪ್ರದೇಶಗಳಲ್ಲಿ ವಲಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.