ಮನುಷ್ಯ ಜಾತಿ ತಾನೊಂದೇ ವಲಂ
ಮೈಸೂರು: ಸಾಮಾಜಿಕ ಸಮಾನತೆಯ ಸಂದೇಶ ಸಾರುವ ವಾರ್ತಾ ಇಲಾಖೆಯ ವಿಶಿಷ್ಟ ಧ್ವನಿ ಬೆಳಕು ದೃಶ್ಯ ವೈಭವಗಳ ರೂಪಕವಾದ ಮನುಷ್ಯ ಜಾತಿ ತಾನೊಂದೇ ವಲಂ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಫೆ. 5ರ ಸಂಜೆ 6.30ಕ್ಕೆ ಅನಾವರಣಗೊಳ್ಳಲಿದೆ.
ಇದಕ್ಕೂ ಮುನ್ನ ಸಂಜೆ 5.30ಕ್ಕೆ ಜನಮನ ತಂಡದಿಂದ ಜನಪದ ಗೀತೆ ಹಾಗೂ ತತ್ವಪದಗಳ ಗಾಯನ ಕಾರ್ಯಕ್ರಮ ಜರುಗಲಿದೆ. ವಾರ್ತಾ ಇಲಾಖೆಯು ರಾಜ್ಯಾದ್ಯಂತ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಇದೀಗ ಮೈಸೂರಿನಲ್ಲಿ ಏರ್ಪಡಿಸಿದ್ದು, ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಜಾತಿ ಪದ್ಧತಿಯ ವಿರುದ್ಧ ಅನಾದಿ ಕಾಲದಿಂದಲೂ ನಮ್ಮ ನೆಲದಲ್ಲಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಲೇ ಬಂದಿವೆ. ಜಾತಿ ಪದ್ಧತಿಯನ್ನು ತೊಡೆದುಹಾಕುವ ದಿಶೆಯಲ್ಲಿ ಹಲವಾರು ಮಹನೀಯರು, ಸಂಘ- ಸಂಸ್ಥೆಗಳು ಅವಿರತವಾಗಿ ಪ್ರಯತ್ನಿಸುತ್ತಿವೆ. ವಾರ್ತಾ ಇಲಾಖೆಯು ಸಹ ಮನುಷ್ಯ ಜಾತಿ ತಾನೊಂದೇ ವಲಂ ಹೆಸರಿನಲ್ಲಿ ಧ್ವನಿ-ಬೆಳಕಿನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜಾತಿ ಪದ್ಧತಿ ತೊಡೆದುಹಾಕಲು ತನ್ನದೇ ಆದ ಕೊಡುಗೆ ನೀಡಿದೆ. ರಾಜ್ಯದ ಇತಿಹಾಸದಲ್ಲೇ ಅತ್ಯದ್ಭುತ ಎನಿಸುವಂತಹ ಧ್ವನಿ - ಬೆಳಕು ದೃಶ್ಯ ವೈಭವಗಳ ರೂಪಕದಿಂದ ಕೂಡಿದ್ದ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಹಿರಿಯ ರಂಗ ನಿರ್ದೇಶಕ ಸಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ 150 ಮಂದಿ ಯುವ ಕಲಾವಿದರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪರಿಶಿಷ್ಟ ಜಾತಿಗಳ ವಿಶೇಷ ಘಟಕ ಯೋಜನೆಯಡಿ ಬೆಂಗಳೂರು ಹಾಗೂ ರಾಜ್ಯದ ಇತರೆ 13 ಜಿಲ್ಲೆಗಳಲ್ಲಿ ಈ ಧ್ವನಿ ಬೆಳಕಿನ ಕಾರ್ಯಕ್ರಮ ನಡೆಯಲಿದೆ.
ಎಲ್ಲೆಲ್ಲಿ ಕಾರ್ಯಕ್ರಮ: ಮೈಸೂರಿನಲ್ಲಿ ಪ್ರದರ್ಶನಗೊಂಡ ಬಳಿಕ ಮಡಿಕೇರಿ (ಫೆ.6), ಮಂಗಳೂರು (ಫೆ.7), ಚಿಕ್ಕಮಗಳೂರು (ಫೆ.8), ಉಡುಪಿ (ಫೆ.9), ಕಾರವಾರ (ಫೆ.10), ಬೆಳಗಾವಿ (ಫೆ.11), ವಿಜಾಪುರ (ಫೆ.12), ಯಾದಗಿರಿ (ಫೆ.13), ರಾಯಚೂರು (ಫೆ.14), ಹೊಸಪೇಟೆ (ಫೆ.15) ಮತ್ತು ಸಾಣೆಹಳ್ಳಿಯಲ್ಲಿ (ಫೆ.16) ರಂದು ಸಮಾರೋಪ ಸಮಾರಂಭದೊಂದಿಗೆ ಧ್ವನಿ- ಬೆಳಕಿನ ಕಾರ್ಯಕ್ರಮದ ಸರಣಿ ಮುಕ್ತಾಯಗೊಳ್ಳಲಿದೆ.
ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರ ಈ ಪರಿಕಲ್ಪನೆ ಈ ಕಾರ್ಯಕ್ರಮ ರೂಪಿಸಿದ್ದು, ಕೋಟಗಾನಹಳ್ಳಿ ರಾಮಯ್ಯ, ಲಕ್ಷ್ಮೀಪತಿ ಕೋಲಾರ ಅವರ ಸಾಹಿತ್ಯ, ಡಾ.ಕೆ.ವೈ. ನಾರಾಯಣ ಸ್ವಾಮಿ ಗೀತರಚನೆ, ಹಂಸಲೇಖ ಸಂಗೀತ, ಶಶಿಧರ ಅಡಪ ರಂಗ ವಿನ್ಯಾಸ ನೀಡಿದ್ದಾರೆ.