ಸರ್ಕಾರಿ ಕಟ್ಟಡಗಳಿಗೆ ನಂಜಪ್ಪ ಹೆಸರು: ಸಾ.ರಾ. ಮಹೇಶ್
ಕೆ.ಆರ್. ನಗರ: ಮಾಜಿ ಸಚಿವ ಎಸ್. ನಂಜಪ್ಪ ಮತ್ತು ಮಾಜಿ ಶಾಸಕ ಮಂಚನಹಳ್ಳಿ ಮಹದೇವ್ ಅವರ ಹೆಸರನ್ನು ಪಟ್ಟಣದ ಸರ್ಕಾರಿ ಕಟ್ಟಡಗಳಿಗೆ ನಾಮಕರಣ ಮಾಡುವುದಾಗಿ ಶಾಸಕ ಸಾ.ರಾ. ಮಹೇಶ್ ಹೇಳಿದರು.
ಪಟ್ಟಣದ ಪುರಸಭಾ ಬಯಲು ರಂಗಮಂದಿರದಲ್ಲಿ ನಡೆದ ಮಾಜಿ ಸಚಿವ ಎಸ್.ನಂಜಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಸುಮಾರು 8 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ನಂಜಪ್ಪ ಅವರ ಹೆಸರು, ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಮಂಚನಹಳ್ಳಿ ಮಹದೇವ್ ಹೆಸರನ್ನು ಇಡಲಾಗುವುದು. ಇದರಿಂದ ತಾಲೂಕಿನ ಜನತೆ ಮನಸ್ಸಿನಲ್ಲಿ ಇವರ ಹೆಸರು ಚಿರಸ್ಥಾಯಿಯಾಗಿರುತ್ತವೆ ಎಂದು ತಿಳಿಸಿದರು.
ನಾನು ಕೆ.ಆರ್. ನಗರಕ್ಕೆ ರಾಜಕಾರಣ ಮಾಡಲು ಬಂದಾಗ ಮಾಜಿ ಸಚಿವರಾದ ಎಚ್. ವಿಶ್ವನಾಥ್ ಮತ್ತು ಎಸ್.ನಂಜಪ್ಪ ಅವರ ಆಶೀರ್ವಾದ ಪಡೆದು ಆರಂಭಿಸಿದೆ. ಈ ಇಬ್ಬರ ಸೌಹಾರ್ದತೆ ರಾಜಕಾರಣ ನನಗೆ ಮಾದರಿ ಎಂದು ಹೇಳಿದರು.
ಸಂಸದ ಎಚ್. ವಿಶ್ವನಾಥ್ ಮಾತನಾಡಿ, ಎಸ್.ನಂಜಪ್ಪ ಅವರು ವಕೀಲರಾಗಿ, ಶಾಸಕರಾಗಿ, ಮಂತ್ರಿಯಾಗಿ ಹಲವಾರು ಜನಪರ ಕೆಲಸಗಳನ್ನು ಮಾಡಿರುವುದರ ಜತೆಗೆ, ಸಹಕಾರ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ, ನವನಗರ ಅರ್ಬನ್ ಬ್ಯಾಂಕ್ ಸ್ಥಾಪನೆ ಮಾಡುವ ಮೂಲಕ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸಾಲ-ಸೌಲಭ್ಯ ನೀಡಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಿದ್ದರು ಎಂದು ಸ್ಮರಿಸಿದರು.
ಬ್ಯಾಂಕ್ಗೆ ಅಪಾರ ಶ್ರಮ: ಹೊರವಲಯದಲ್ಲಿದ್ದ ರೇಲ್ವೆ ನಿಲ್ದಾಣವನ್ನು ನಗರದ ಹತ್ತಿರಕ್ಕೆ ಸ್ಥಳಾಂತರಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡುವುದರ ಜತೆಗೆ, ಪಿಎಲ್ಡಿ ಬ್ಯಾಂಕ್ ಪ್ರಗತಿಗೆ ಅಪಾರ ಶ್ರಮ ವಹಿಸಿದ್ದರು. ಜನತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ವೇಳೆಯಲ್ಲಿ ಮಾತ್ರ ರಾಜಕಾರಣ ಮಾಡಬೇಕು. ನಂತರ ದ್ವೇಷದ ರಾಜಕಾರಣ ಮಾಡಬಾರದು. ಅಂತಹ ರಾಜಕಾರಣವನ್ನು ನಾವಿಬ್ಬರು ಮಾಡಿದ್ದೇವೆ ಎಂದು ನೆನಪಿಸಿಕೊಂಡರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಟಿ.ಕೆ. ಚಿನ್ನಸ್ವಾಮಿ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ಸದಸ್ಯ ರಾಜಯ್ಯ, ಮಾಜಿ ಸದಸ್ಯ ಎಂ.ಟಿ. ಕುಮಾರ್, ಎಂಡಿಸಿಸಿ ನಿರ್ದೇಶಕ ಎ.ಟಿ. ಸೋಮಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಸಾಹಿತಿ ತೇಸಿ ವಿಶ್ವೇಶ್ವರಯ್ಯ, ಪುರಸಭಾ ಮಾಜಿ ಉಪಾಧ್ಯಕ್ಷೆ ನಾಗರತ್ನಮ್ಮ, ಸದಸ್ಯರಾದ ಎನ್.ಶಿವಕುಮಾರ್, ಎಚ್.ಸಿ.ರಾಜು, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ತಾಪಂ ಸದಸ್ಯ ನಾಗಣ್ಣ, ನಿವೃತ್ತ ಉಪನ್ಯಾಸಕ ಕೆ.ಆರ್. ಲಕ್ಕೇಗೌಡ, ತಾಲೂಕು ಕಸಪಾ ಅಧ್ಯಕ್ಷ ಜಿ.ಕೆ.ರಾಜು, ಗೌರವ ಕಾರ್ಯದರ್ಶಿ ರಿಜ್ವಾನ್, ಬಿಜಿಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮುಖಂಡರಾದ ಗಣೇಶ್, ವೆಂಕಟೇಶ್, ವೈ.ಆರ್. ಪ್ರಕಾಶ್, ನಾಗರಾಜು, ಶ್ರೀನಿವಾಸ್, ಎಸ್. ಸಿದ್ದೇಗೌಡ, ದಿನೇಶ್, ಜಿ. ಪ್ರಕಾಶ್ ಇದ್ದರು.