ಸಾಗುವಳಿ ಪತ್ರ ನೀಡಲು ಕ್ರಮ: ಶ್ರೀನಿವಾಸಪ್ರಸಾದ್
ಮೈಸೂರು: ಅನೇಕ ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು. ಮೈಸೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ಮಕ್ಕಳ ಹಬ್ಬ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರೊಂದಿಗೆ ಮಾತನಾಡಿ, ಬಗರ್ಹುಕುಂ ಜಮೀನಿಗೆ ಸಾಗುವಳಿ ಪತ್ರ ನೀಡುವ ಸಂಬಂಧ ಈಗಾಗಲೇ ಉನ್ನತ ಮಟ್ಟದ ಸಭೆ ನಡೆಸಿ ಚರ್ಚಿಸಲಾಗಿದ್ದು, ಸದ್ಯದಲ್ಲಿಯೇ ಆಯಾಯ ಕ್ಷೇತ್ರ ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದರು. ಯಾರು ಸರ್ಕಾರದ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೋ, ಅಂಥವರ ಭೂಮಿಯನ್ನು ಅಕ್ರಮ- ಸಕ್ರಮ ಯೋಜನೆಯಡಿ ಗುರುತಿಸಿ ಸಕ್ರಮಗೊಳಿಸಲಾಗುವುದು. ಏಪ್ರಿಲ್ನೊಳಗೆ ಎಲ್ಲಾ ಪ್ರಕ್ರಿಯೆ ಮುಗಿಯುವ ಸಾಧ್ಯತೆಯಿದ್ದು, ನಂತರ ಭೂ ಸಾಗುವಳಿ ಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.