8ಕ್ಕೆ ಮನೆ ಮನೆಗೆ ಬಿಜೆಪಿ ಕಾರ್ಯಕ್ರಮ
ಕ.ಪ್ರ.ವಾರ್ತೆ , ಮೈಸೂರು , ಫೆ. 4
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಫೆ.8 ರಂದು ಮನೆ ಮನೆಗೆ ಬಿಜೆಪಿ ಕಾರ್ಯಕ್ರಮ ಆರಂಭಿಸಲು ಮಂಗಳವಾರ ನಡೆದ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ಸಭೆ ತೀರ್ಮಾನಿಸಿತು.
ನಗರ ಬಿಜೆಪಿ ಕಚೇರಿಯಲ್ಲಿ ನಡೆದ ಯುವ ಮೋರ್ಚಾದ ಜಿಲ್ಲಾ ಪದಾಧಿಕಾರಿಗಳು ಹಾಗೂ ಯುವ ಮೋರ್ಚಾ ಕ್ಷೇತ್ರ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಮನೆ ಮನೆಗೆ ಬಿಜೆಪಿ ಕಾರ್ಯಕ್ರಮದ ರೂಪು ರೇಷೆಗಳ ಕುರಿತು ಚರ್ಚಿಸಲಾಯಿತು.
ಬೂತ್ ಮಟ್ಟದ ಕಾರ್ಯಕರ್ತರನ್ನು ಸಂಘಟಿಸಿ ಮನೆ ಮನೆಗೆ ತೆರಳಿ ಕರಪತ್ರಗಳನ್ನು ಹಂಚುವ ಮೂಲಕ ಕಾಂಗ್ರೆಸ್ ತೊಲಗಿಸಿ, ದೇಶ ಉಳಿಸಿ, ನಾವು ಟೀ ಮಾರಬಹುದು, ಆದರೆ ದೇಶ ಮಾರುವುದಿಲ್ಲ ಮುಂತಾದ ಘೋಷಣೆಯೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಬೋಗಾದಿ ನಂದೀಶ್ ತಿಳಿಸಿದರು.
ಹತ್ತು ವರ್ಷಗಳಲ್ಲಿನ ಯುಪಿಎ ಸಾಧನೆ ಮತ್ತು ಕೇವಲ ಐದು ವರ್ಷ ಆಡಳಿತ ನಡೆಸಿದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಸಾಧನೆಯನ್ನು ಕಾರ್ಯಕರ್ತರು ಮತದಾರರಿಗೆ ತಿಳಿಸಬೇಕು ಎಂದು ಕರೆ ನೀಡಿದರು.
ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಪರಿಕ್ಷಿತ್ ರಾಜ್ ಅರಸ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೇಮಂತ್ಕುಮಾರ್ ಗೌಡ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಲಲಿತಾದ್ರಿಪುರ ಮಹದೇವ ಸಭೆಯಲ್ಲಿ ಇದ್ದರು.