ಅದ್ಧೂರಿ ಸಿದ್ಧರಾಮೇಶ್ವರ ಜಯಂತಿ
ಕ.ಪ್ರ.ವಾರ್ತೆ , ಎಚ್.ಡಿ.ಕೋಟೆ , ಫೆ. 4
ಪಟ್ಟಣದಲ್ಲಿ ಇದೇ ಪ್ರಥಮ ಬಾರಿಗೆ ಶಿವಯೋಗಿ ಸಿದ್ದರಾಮೇಶ್ವರ 841ನೇ ಜಯಂತಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸಿದ್ದೇಶ್ವರರ ಭಾವಚಿತ್ರಕ್ಕೆ ಶಾಸಕ ಎಸ್. ಚಿಕ್ಕಮಾದು ಪುಷ್ಪಾರ್ಚನೆ ಮಾಡಿ, ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳುಕುಣಿತ, ನಂದಿಧ್ವಜಗಳು ಹಾಗೂ ಇತರೆ ಕಲಾ ತಂಡಗಳು ಭಾಗವಹಿಸಿದ್ದವು. ಮೆರವಣಿಗೆಯು ಅಂಬೇಡ್ಕರ್ ಭವನದಲ್ಲಿ ಕೊನೆಗೊಂಡಿತು. ಇದಾದ ಬಳಿಕ ವೇದಿಕೆಯ ಮೇಲಿನ ಕಾರ್ಯಕ್ರಮವು ಆರಂಭವಾಯಿತು.
ಕಾರ್ಯಕ್ರಮವನ್ನು ಮಾಜಿ ಸಚಿವ ಎಂ.ಶಿವಣ್ಣ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ 15 ಸಾವಿರ ಮಂದಿ ಭೋವಿ ಜನಾಂಗದವರಿದ್ದು, ಇವರು ವೃತ್ತಿಯಲ್ಲಿ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಈಗ ಗುತ್ತಿಗೆ ಕೆಲಸಗಳು ಇಲ್ಲದೆ ಪರದಾಡುವಂತಾಗಿದೆ. ಸರ್ಕಾರಗಳು ರಾಜ್ಯದಲ್ಲಿ ಎಲ್ಲ ವರ್ಗದವರು ಒಗ್ಗೂಡಲಿ ಎಂಬ ಕಾರಣಕ್ಕಾಗಿ ಈ ರೀತಿಯಾಗಿ ಜಯಂತಿ ಆಚರಿಸುತ್ತಿದೆ ಎಂದು ತಿಳಿಸಿದರು.
ಜಾಗವಿಲ್ಲದೆ ಪರದಾಟ: ಜನಾಂಗದ ಮುಖಂಡ ಎಂ.ಜಿ. ರಾಮಕೃಷ್ಣಪ್ಪ ಮಾತನಾಡಿ, ತಾಲೂಕಿನಲ್ಲಿ 15 ಸಾವಿರ ಮಂದಿ ಭೋವಿ ಜನಾಂಗದವರಿದ್ದು, ತಾಲೂಕು ಕೇಂದ್ರದಲ್ಲಿ ಭವನ ನಿರ್ಮಿಸಲು ಸ್ವಂತ ಜಾಗವೂ ಇಲ್ಲದೇ ಪರದಾಡುವಂತಾಗಿದೆ.
ಶಾಸಕರು ಭವನಕ್ಕೆ ನಿವೇಶ ಕೊಡಿಸಬೇಕು. ಪಟ್ಟಣದ ಗದ್ದಿಗೆ ವೃತ್ತಕ್ಕೆ ಸಿದ್ದರಾಮೇಶ್ವರ ಹೆಸರನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.
ಶಾಸಕ ಎಸ್.ಚಿಕ್ಕಮಾದು ಮಾತನಾಡಿ, ಸಿದ್ದರಾಮೇಶ್ವರರು ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ವಚನವನ್ನು ಸಾರಿದ ಧೀಮಂತರಾಗಿದ್ದರು. ಇಂತಹವರ ಆಚರಣೆಯನ್ನು ಎಲ್ಲ ಜನಾಂಗದವರೂ ಸಹ ಒಗ್ಗೂಡಿ ಆಚರಿಸಬೇಕು. ಇದು ಕೇವಲ ಒಂದು ಜನಾಂಗದವರ ಜಯಂತಿ ಆಗಬಾರದು ಎಂದು ತಿಳಿಸಿದರು.
ಜಿಪಂ ಸದಸ್ಯೆ ನಂದಿನಿ ಚಂದ್ರಶೇಖರ್, ತಾಪಂ ಅಧ್ಯಕ್ಷೆ ಚಂದ್ರಮ್ಮ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್, ತಾಲೂಕು ತೋಟದ ಬೆಳೆಗಾರರ ಸಂಘದ ಅಧ್ಯಕ್ಷ ಪುಟ್ಟಯ್ಯ, ಕಸಾಪ ಅಧ್ಯಕ್ಷ ಮಹೇಶ್, ಜಿಪಂ ಮಾಜಿ ಸದಸ್ಯರಾದ ರವಿ, ವೆಂಕಟಸ್ವಾಮಿ, ಮಳಲಿ ಶಾಂತಕುಮಾರ್, ಜನಾಂಗದ ಮುಖಂಡರಾದ ವೆಂಕಟರಮಣಯ್ಯ, ವೆಂಕಟೇಶ್, ರಾಮಯ್ಯ, ಕಂದಸ್ವಾಮಿ, ಮಣಿ, ಗಿರಿಯಯ್ಯ, ವಿ.ವೆಂಕಟೇಶ್, ತಾ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀಕಂಠಯ್ಯ, ಮಾಜಿ ಪ್ರಧಾನ ಎಂ.ಸಿ. ದೊಡ್ಡನಾಯಕ, ಚಿಕ್ಕವೀರನಾಯಕ, ನಾಗರಾಜು, ಗೋಪಾಲಸ್ವಾಮಿ, ರಾಮು, ಗೋಪಾಲ್, ಡಿ. ಗೋಪಾಲ್, ರಾಜರತ್ನಂ, ತಹಸೀಲ್ದಾರ್ ಕೃಷ್ಣ, ಇಒ ಲಿಂಗರಾಜು, ಬಿಇಒ ಉದಯಕುಮಾರ್, ಎಇಇ ಅಚ್ಚುತ್, ಶಂಕರಯ್ಯ ಭಾಗವಹಿಸಿದ್ದರು.