ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಾನವ ಕುಲದ ಏಕತೆಗೆ ಕಲೆ ಸಹಕಾರಿ

Vishwanath S
Updated On : 5 Feb 2014, 12:04 pm

ಮೈಸೂರು: ಕಲೆಯಿಂದ ಮಾನವ ಕುಲದ ಐಕ್ಯತೆ ಸಾಧ್ಯ ಎಂದು ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಹೇಳಿದರು.
ಕನ್ನಡ ಶ್ರೀಕಲಾವೃಂದದ 42ನೇ ವಾರ್ಷಿಕೋತ್ಸವದ ಅಂಗವಾಗಿ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿರುವ ಮೂರು ದಿನಗಳ ರಂಗ ವೈಭವ ನಾಟಕೋತ್ಸವವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನ ಸಾಹಿತ್ಯ ಮತ್ತು ಕಲೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ನಮ್ಮ ಪುರಾತನ ಸಂಸ್ಕೃತಿಯ ವಿವಿಧ ಆಯಾಮಗಳನ್ನು ಸಾರುವ ಕಲೆಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಲ್ಲ. ಮನುಷ್ಯನ ವಿಕಾಸ ಹಾಗೂ ಒಗ್ಗೂಡಿಸುವ ಸಾಧನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜನಪ್ರಿಯ ಸಂಸ್ಕೃತಿ ಹಾಗೂ ಜನಪರ ಸಂಸ್ಕೃತಿ ಎಂಬ ಎರಡು ವಿಧಗಳಿವೆ. ಜನಪ್ರಿಯ ಕಲೆಗಳಲ್ಲಿ ಹಣ ಇದ್ದರೆ, ಸತ್ವ ಇರುವುದಿಲ್ಲ. ಜನಪರ ಕಲೆಗಳಲ್ಲಿ ಸತ್ವ ಇದ್ದರೆ ಹಣ ಇರುವುದಿಲ್ಲ. ಹೀಗಾಗಿ ಜನಪರ ವೃತ್ತಿ ರಂಗಭೂಮಿಯ ಕಲಾವಿದರಿಗೆ ನಿಜವಾಗಿ ಸೇರಬೇಕಾದ ಪ್ರತಿಫಲ ದೊರಕುತ್ತಿಲ್ಲ ಎಂದು ವಿಷಾದಿಸಿದರು.
ಯಾವುದೇ ಕಲೆ ಉಳಿಯಬೇಕಾದರೆ ಅಲ್ಲಿ ಹುಚ್ಚು ಬೆಳೆಸಿಕೊಳ್ಳಬೇಕು. ಅಂತಹ ಗೀಳಿನ ವ್ಯಕ್ತಿಗಳ ಸಂಖ್ಯೆ ಹೆಚ್ಚಾದಾಗ ಮಾತ್ರ ಇಂತಹ ಕಲೆಗಳು ಉಳಿಯಲು ಸಾಧ್ಯ. ಇಂದಿನ ಆಡಂಬರದ ಸಂಸ್ಕೃತಿಯ ನಡುವೆ ವೃತ್ತಿರಂಗಭೂಮಿ ಕಲಾವಿದರು ಯಾವುದೇ ಪ್ರಚಾರ ಇಲ್ಲದೆ ಸರಳವಾಗಿ ಕಾರ್ಯಕ್ರಮ ನಡೆಸುವ ಮೂಲಕ ಕಲಾಸೇವೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕರ್ನಾಟಕ ಕಾವಲು ಪಡೆ ರಾಜ್ಯಾಧ್ಯಕ್ಷ ಎಂ.ಮೋಹನ್‌ಕುಮಾರ್ ಗೌಡ, ಜಿಪಂ ಸದಸ್ಯ ಹೊನ್ನನಾಯಕ, ಕಲಾ ಪೋಷಕ ಶಿವಶಂಕರ್, ವರ್ಣಾಲಂಕಾರ ಕಲಾವಿದ ಬಿ.ಎಂ. ರಾಮಚಂದ್ರ, ಪ್ರಚಾರ ಕಲಾವಿದ ಮೈಕ್ ಚಂದ್ರು ಮುಖ್ಯ ಅತಿಥಿಗಳಾಗಿದ್ದರು.
ಸಂಸ್ಥೆ ಅಧ್ಯಕ್ಷ ಮೈ.ಮ. ನಾಗರಾಜ್, ಕಾರ್ಯದರ್ಶಿ ಕೆ.ಮಹಾಲಿಂಗು, ಸಹಕಾರ್ಯದರ್ಶಿಗಳಾದ ಜಗದೀಶ್, ಅಲೆಗ್ಸಾಂಡರ್, ನಾಗರಾಜ್ ಇದ್ದರು. ನಂತರ ಕೆ.ಜಿ.ಕೊಪ್ಪಲಿನ ರಾಮೇಗೌಡ ಮಿತ್ರ ಮಂಡಳಿಯ ಕಲಾವಿದರು ಮಹಿಷಾಸುರ ಮರ್ದಿನಿ ಪೌರಾಣಿಕ ನಾಟಕ ಅಭಿನಯಿಸಿದರು. ಇದಕ್ಕೂ ಮುನ್ನ ಕಲಾವಂೃದದವರು ರಾಷ್ಟ್ರಕವಿಗಳಾದ ಕುವೆಂಪು ಹಾಗೂ ಜಿಎಸ್ಸೆಸ್ ಅವರ ಗೀತಗಾಯನ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement