ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಾರಕ ವ್ಯಾಧಿಗೆ ಮುನ್ನೆಚ್ಚರಿಕೆ ಮದ್ದು

Vishwanath S
Updated On : 5 Feb 2014, 12:03 pm

ಕ.ಪ್ರ.ವಾರ್ತೆ ,  ಮೈಸೂರು ,  ಫೆ. 4
ಯಾವುದೇ ಮಾರಕ ವ್ಯಾಧಿ ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸುವುದೇ ಮದ್ದು ಎಂದು ಮೆಡಿವೇವ್ ಗರ್ಭಧಾರಣ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ. ಶರತ್‌ಕುಮಾರ್ ಹೇಳಿದರು.
ಯುವರಾಜ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೆಡ್ ರಿಬ್ಬನ್ ಸಂಘ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿದ್ದ ಏಡ್ಸ್ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಏಡ್ಸ್ ಹಾಗೂ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗೆ ವೈದ್ಯಕೀಯ ರಂಗದ ವಿಜ್ಞಾನಿಗಳು ಈವರೆಗೆ ಯಾವುದೇ ಔಷಧ ಕಂಡುಹಿಡಿದಿಲ್ಲ. ಗುಣಪಡಿಸಲು ಸಾಧ್ಯವಾಗದ ಈ ವ್ಯಾಧಿ ಬಂದರೆ ಮನುಷ್ಯನ ಜೀವಕ್ಕೆ ಹಾನಿ ತಪ್ಪಿದ್ದಲ್ಲ. ಇದು ಬಂದಾಗ ತೊಂದರೆ ಅನುಭವಿಸುವುದಕ್ಕಿಂತ ಬಾರದಂತೆ ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸುವುದೇ ನಿಜವಾದ ಮದ್ದು ಎಂದರು.
1980 ರಲ್ಲಿ ಇಡೀ ವಿಶ್ವದಲ್ಲಿಯೇ ಆಫ್ರಿಕಾ ದೇಶದಲ್ಲಿ ಮೊದಲ ಏಡ್ಸ್ ಪ್ರಕರಣ ಕಂಡುಬಂತು. ಭಾರತದಲ್ಲಿ 1989 ರಲ್ಲಿ ಚೆನ್ನೈನಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂತು. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಹಾಗೂ ಮಣಿಪುರ ರಾಜ್ಯಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಜಗತ್ತಿನಲ್ಲಿ 34.5 ಮಿಲಿಯನ್, ಭಾರತದಲ್ಲಿ 5.1 ಮಿಲಿಯನ್ ಹಾಗೂ ಕರ್ನಾಟಕದಲ್ಲಿ 2 ಸಾವಿರ ಮಂದಿಯಲ್ಲಿ ಒಬ್ಬರಿಗೆ ಎಚ್‌ಐವಿ ಕಂಡು ಬಂದಿದೆ ಎಂದು ವಿವರಿಸಿದರು.
ನಿಧಾನವಾಗಿ ಕೊಲ್ಲುವ ರೋಗ: ಎಚ್‌ಐವಿಯು ಅಪರಿಚಿತರೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದಾಗ, ಪೀಡಿತರಿಂದ ರಕ್ತದಾನ ಪಡೆದಾಗ, ಉಪಯೋಗಿಸಿದ ಸಿರಿಂಜ್ ಬಳಕೆ ಹಾಗೂ ವ್ಯಾಧಿ ಮಹಿಳೆಯಿಂದ ಮಗುವಿಗೆ ಹರಡಲಿದೆ. ಇದೊಂದು ನಿಧನವಾಗಿ ಕೊಲ್ಲುವ ವ್ಯಾಧಿಯಾಗಿದ್ದು ಸಮಾಜ ಇದನ್ನು ತಡೆಗಟ್ಟಲು ಮುಂಜಾಗ್ರತೆ ವಹಿಸಬೇಕು. ಅದರಲ್ಲೂ ಮುಖ್ಯವಾಗಿ ಯುವಜನತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಒಡನಾಡಿ ಸಂಸ್ಥೆ ನಿರ್ದೇಶಕ ಕೆ.ವಿ. ಸ್ಟ್ಯಾನ್ಲಿ ಮಾತನಾಡಿ, ಎಚ್‌ಐವಿಯಿಂದ ಆಗುವ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳನ್ನು ವಿವರಿಸಿದರು.
ಯುವರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಟಿ. ಪುಟ್ಟಸ್ವಾಮಿ, ಆಶಾಕಿರಣ ಆಸ್ಪತ್ರೆ ಹಿರಿಯ ಸಮಾಲೋಚಕಿ ಚೈತ್ರ ನಾಯರ್ ಅತಿಥಿಗಳಾಗಿದ್ದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ದೇವರಾಜು ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement