ಸಿಎಂ ಸಿದ್ದುಗಿಲ್ಲ ತವರು ಸನ್ಮಾನ ಭಾಗ್ಯ!
ಮೈಸೂರು: ರಾಜ್ಯಕ್ಕೆ ಹತ್ತು ಹಲವಾರು ಭಾಗ್ಯಗಳನ್ನು ಕರುಣಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ತವರಿನಲ್ಲಿ ಪೌರ ಸನ್ಮಾನ ಕಾಣುವ ಭಾಗ್ಯ ಇನ್ನೂ ದೊರೆಯದಿರುವುದು ಅಚ್ಚರಿ ಎನಿಸಿದರೂ ವಾಸ್ತವ ಸಂಗತಿ ಎಂಬುದು ಬಹಿರಂಗ ಸತ್ಯ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳು ಕಳೆದಿದೆ. ಆದರೆ ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ಸಿದ್ದರಾಮಯ್ಯ ಅವರಿಗೆ ಪೌರ ಸನ್ಮಾನ ಮಾಡಲು ರಾಜಕೀಯ ಅಡ್ಡಬಂದಿದೆ.
ಹೌದು, ನಗರ ಪಾಲಿಕೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪೌರ ಸನ್ಮಾನ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಅವರ ಬಳಿಕ ಮೈಸೂರಿನವರು ಮುಖ್ಯಮಂತ್ರಿ ಆಗಿದ್ದಾರೆ ಎಂಬ ಕಾರಣಕ್ಕೆ ಪಾಲಿಕೆ ಸದಸ್ಯರ ನಡುವೆ ಹಲವು ಸುತ್ತಿನ ಮಾತುಕತೆ ನಡೆದು ಕಳೆದ ಜ. 3 ರಂದು ಪೌರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಸಕರೊಬ್ಬರ ವಿರುದ್ಧ ಆರೋಪ: ಕೆಲವರ ಮುನಿಸು ಮತ್ತು ರಾಜಕೀಯ ಕಾರಣಕ್ಕೆ ಸಿದ್ದರಾಮಯ್ಯ ಅವರಿಗೆ ಆಯೋಜಿಸಿದ್ದ ಪೌರ ಸನ್ಮಾನ ರದ್ದಾಗಿದೆ. ಆದರೆ ಕಾಂಗ್ರೆಸ್‌ನವರು ಅಂದು ಸಿದ್ದರಾಮಯ್ಯ ಅವರು ದೆಹಲಿಗೆ ತೆರಳುವುದಿತ್ತು ಎಂಬ ಕಾರಣ ನೀಡುತ್ತಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ. 3 ರಂದು ಬೆಂಗಳೂರಿನಲ್ಲಿಯೇ ಇದ್ದರು. ಅವರು ದೆಹಲಿಗೆ ಹೋಗಿಲ್ಲ. ಮೈಸೂರಿನ ಸ್ಥಳೀಯ ಶಾಸಕರೊಬ್ಬರು ಉದ್ದೇಶ ಪೂರ್ವಕವಾಗಿ ದಾರಿ ತಪ್ಪಿಸಿದ್ದಾರೆ ಎಂದು ಪಾಲಿಕ ಕೆಲ ಸದಸ್ಯರು ಆರೋಪಿಸಿದ್ದಾರೆ.
ಹಲವು ಸುತ್ತಿನ ಸಭೆ: ಮೈಸೂರು ನಗರದ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆ ರೂಪಿಸಿ ಸಲ್ಲಿಸಿದರೆ, ಅಗತ್ಯ ನೆರವು ನೀಡುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದರು. ಅದರಂತೆ ಸಿದ್ದರಾಮಯ್ಯ ಅವರನ್ನು ಪೌರ ಸನ್ಮಾನಕ್ಕೆ ಆಹ್ವಾನಿಸಲು ತೆರಳಿದ್ದ ತಂಡ ನಗರ ಪಾಲಿಕೆಯ ಈಗಿನ ಕಟ್ಟಡದ ಹಿಂಭಾಗದಲ್ಲಿ -2 ಸೆಲ್ಲಾರ್ ನಿರ್ಮಿಸಿ ಅಲ್ಲಿ ವಾಹನ ನಿಲ್ದಾಣ, ನೆಲ ಅಂತಸ್ತಿನಲ್ಲಿ ಸುಮಾರು 300 ರಿಂದ 350 ಮಂದಿ ಕೂರಬಹುದಾದ ಸಭಾಂಗಣ, ಮೊದಲ ಮಹಡಿಯಲ್ಲಿ ಮೇಯರ್, ಉಪ ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರು, ಆಡಳಿತ ಪಕ್ಷ, ಪ್ರತಿಪಕ್ಷ ನಾಯಕರು, ಪಾಲಿಕೆ ಆಯುಕ್ತರ ಕಚೇರಿ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಅಲ್ಲದೆ ಚಾಮರಾಜ ಜೋಡಿ ರಸ್ತೆ, ವಾಣಿವಿಲಾಸ ರಸ್ತೆಯನ್ನು ರಾಜಮಾರ್ಗದಂತೆ ಅಭಿವೃದ್ಧಿಪಡಿಸುವುದು, ದೇವರಾಜ ಮಾರುಕಟ್ಟೆ ಮತ್ತು ವಾಣಿವಿಲಾಸ ಮಾರುಕಟ್ಟೆ ಅಭಿವೃದ್ಧಿ, ಕಸ ವಿಲೇವಾರಿ ಕೇಂದ್ರ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು.
ಪ್ರತಿಪಕ್ಷಗಳಿಗೆ ಇರುಸು-ಮುರುಸು: ನಗರ ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಆಡಳಿತ ನಡೆಸುತ್ತಿದೆ. ಪೌರ ಸನ್ಮಾನಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರು ಸೇರಿ ಚರ್ಚಿಸಿ ಮುಖ್ಯಮಂತ್ರಿಗಳಿಗೆ ಪೌರ ಸನ್ಮಾನ ನೆರವೇರಿಸಿದ ಬಳಿಕ ಮೈಸೂರು ನಗರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು, ತಾವು ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲು ನಿರ್ಧರಿಸಿದರು. ಆದರೆ ಪ್ರತಿಪಕ್ಷ ಸದಸ್ಯರಿಗೆ ಮುಖ್ಯಮಂತ್ರಿಗಳನ್ನು ಕರೆದು ಸನ್ಮಾನಿಸಿ ಮನವಿ ಕೊಡುವುದು ಇರುಸು ಮುರುಸು ಉಂಟುಮಾಡಿದೆ. ಅಲ್ಲದೆ ಸ್ಥಳೀಯ ಶಾಸಕರೊಬ್ಬರು ಮುಖ್ಯಮಂತ್ರಿಗಳಿಗೆ ಕಲಾಮಂದಿರದಲ್ಲಿ ಪೌರ ಸನ್ಮಾನ ನೆರವೇರಿಸಬೇಕು ಎಂದು ಪಟ್ಟು ಹಿಡಿದರು ಎನ್ನಲಾಗಿದೆ.
ಸದ್ಯಕ್ಕಿಲ್ಲ ಸನ್ಮಾನ: ಕಲಾಮಂದಿರದಲ್ಲಿ ಕಾರ್ಯಕ್ರಮ ನೆರವೇರಿಸಿದರೆ ಅದೊಂದು ಪಕ್ಷದ ಕಾರ್ಯಕ್ರಮ ಆಗುತ್ತದೆ. ಆದ್ದರಿಂದ ಪಾಲಿಕೆ ಆವರಣದಲ್ಲಿಯೆ ಕಾರ್ಯಕ್ರಮ ನಡೆಯಬೇಕು ಎಂಬುದು ಪಾಲಿಕೆ ಇತರ ಸದಸ್ಯರು ವಾದಿಸಿದ್ದಾರೆ. ಈ ಎಲ್ಲಾ ಗೊಂದಲ ಮತ್ತು ರಾಜಕೀಯ ಪ್ರತಿಗಾಗಿ ಸಿದ್ದರಾಮಯ್ಯ ಅವರಿಗೆ ನಡೆಸಲು ಉದ್ದೇಶಿಸಿದ್ದ ಪೌರ ಸನ್ಮಾನ ಸದ್ಯಕ್ಕೆ ತಪ್ಪಿದಂತಾಗಿದೆ.
ಈ ಮುಂಚೆ ಪಾಲಿಕೆಯ ಹಿಂಭಾಗದ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಗರ ಪಾಲಿಕೆಗೆ ರು.100 ಕೋಟಿ ಅನುದಾನ ನೀಡಿದ ಬಿ.ಎಸ್. ಯಡಿಯೂರಪ್ಪ, ವರನಟ ಡಾ.ರಾಜ್‌ಕುಮಾರ್, ಲ್ಯಾಂಬತ್ ಮೇಯರ್ ಡಾ. ನೀರಜ್ ಪಾಟೀಲ್ ಅವರಿಗೆ ಪೌರ ಸನ್ಮಾನ ಮಾಡಲಾಗಿದೆ.
-ಡಿ.ಎನ್. ಮಹೇಂದ್ರ