ಹೆಂಡತಿಯನ್ನೇ ಇರಿದು ಕೊಂದ
ಮೈಸೂರು: ಮಹಿಳೆಯೊಬ್ಬರು ತನ್ನ ಪತಿಯಿಂದಲೇ ಕೊಲೆಯಾಗಿರುವ ಘಟನೆ ಬನ್ನಿಮಂಟಪದ ಅಲೀಂನಗರದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಕೇರಳ ಮೂಲದ ನಿವಾಸಿ ರಸೀನಾ(34) ಕೊಲೆಯಾದವರು. ಈಕೆಯ ಕೊಲೆ ಆರೋಪಿ ಕೇರಳ ಮೂಲದ ರಂಜಿತ್ ಅ. ಮೊಹಮ್ಮದ್ ಆಸಿಫ್ ಪರಾರಿಯಾಗಿದ್ದಾನೆ.
ಕೇರಳ ಮೂಲದ ರಸೀನಾಗೆ ಮೈಸೂರಿನ ಅಲೀಂನಗರ ನಿವಾಸಿ ಮೊಹಮ್ಮದ್ ಆಸಿಫ್ ಜೊತೆಗೆ 13 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳು ಸಹ ಇದ್ದಾರೆ.
ಆದರೆ, ರಸೀನಾ ಆಗಾಗ ಕೇರಳದಲ್ಲಿರುವ ತಮ್ಮ ಸ್ವಂತ ಊರಿಗೆ ಹೋಗಿ ಬರುತ್ತಿದ್ದರು. ಈ ವೇಳೆ ಅದೇ ಊರಿನ ರಂಜಿತ್ ಎಂಬಾತನ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿದೆ. ಇದರಿಂದಾಗಿ ಪತಿ ಮತ್ತು ಇಬ್ಬರು ಮಕ್ಕಳನ್ನು ಮೈಸೂರಿನಲ್ಲೇ ಬಿಟ್ಟು, ರಂಜಿತ್ನೊಂದಿಗೆ ಕೇರಳಕ್ಕೆ ಪರಾರಿಯಾಗಿದ್ದರು.
ವಿಚಾರ ಗೊತ್ತಾದ ಬಳಿಕ ಮೊದಲ ಪತಿ ಮೊಹಮ್ಮದ್ ಆಸಿಫ್ ಎರಡನೇ ಮದುವೆಯಾಗಿದ್ದಾರೆ. ಇಬ್ಬರು ಮಕ್ಕಳನ್ನು ಆಸಿಫ್ನ ತಾಯಿ ಸಾಕುತ್ತಿದ್ದರು. ರಂಜಿತ್ನೊಂದಿಗೆ ತೆರಳಿದ್ದರೂ ರಸೀನಾ ಪದೇ ಪದೆ ಮೈಸೂರಿಗೆ ಬಂದು ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದರು.
ರಂಜಿತ್ನೊಂದಿಗೆ ಜಗಳವಾಡಿದ್ದ ರಸೀನಾ 6 ತಿಂಗಳ ಹಿಂದಷ್ಟೇ ಮೈಸೂರಿನ ಅಲೀಂನಗರಕ್ಕೆ ಬಂದು ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಇಲ್ಲಿಗೆ ಬಂದ ಕೆಲವು ದಿನಗಳ ನಂತರ ರಂಜಿತ್ ಹಿಂಬಾಲಿಸಿಕೊಂಡು ಬಂದು, ರಸೀನಾಳೊಂದಿಗೆ ನೆಲೆಸಿದ್ದನು.
ಹೀಗಾಗಿ ರಸೀನಾ ತನ್ನ ಪ್ರಿಯಕರ ರಂಜಿತ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸಿ, ಮೊಹಮ್ಮದ್ ಆಸಿಫ್ ಎಂದು ನಾಮಕರಣ ಮಾಡಿಸಿದ್ದಳು. ಅಲ್ಲದೆ, ಮಸೀದಿಯೊಂದರಲ್ಲಿ ಇಸ್ಲಾಂ ಧರ್ಮದ ಪ್ರಕಾರ ವಿವಾಹ ಸಹ ಆಗಿದ್ದರು. ತನ್ನ ಅತ್ತೆಯ (ಮೊದಲ ಪತಿ ತಾಯಿ) ಬಳಿ ಬೆಳೆಯುತ್ತಿದ್ದ ಮಕ್ಕಳನ್ನು ಸಹ ರಸೀನಾ ತನ್ನ ಮನೆಗೆ ಕರೆದುಕೊಂಡು ಬಂದು ಇರಿಸಿದ್ದರು.
ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದರೂ ರಂಜಿತ್ ಮುಂಜಿ ಮಾಡಿಸಿಕೊಂಡಿರಲಿಲ್ಲ. ಹೀಗಾಗಿ ಮುಂಜಿ ಮಾಡಿಸಿಕೊಳ್ಳುವಂತೆ ರಸೀನಾ ಒತ್ತಡ ಹೇರಿದ್ದಾರೆ. ಆದರೆ, ಇದಕ್ಕೆ ರಂಜಿತ್ ಹಿಂದೇಟು ಹಾಕಿದ್ದನು. ಇದೇ ವಿಚಾರವಾಗಿ ವಾರದಿಂದ ಇಬ್ಬರ ನಡುವೆ ಪದೇ ಪದೆ ಜಗಳ ನಡೆದಿದೆ. ಮುಂಜಿ ವಿಚಾರವಾಗಿ ಸೋಮವಾರ ರಾತ್ರಿ ಸಹ ಇಬ್ಬರು ಜಗಳವಾಡಿದ್ದರು. ಮಂಗಳವಾರ ಬೆಳಗ್ಗೆ ಇದೇ ವಿಚಾರಕ್ಕಾಗಿ ರಸೀನಾ ಜಗಳವಾಡಿದಾಗ ರಂಜಿತ್ ಚಾಕುವಿನಿಂದ ಆಕೆಯ ಹೊಟ್ಟೆ, ಎದೆ, ಕುತ್ತಿಗೆ ಹಾಗೂ ಬೆನ್ನಿನ ಭಾಗಕ್ಕೆ ಬಲವಾಗಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.