ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎರಡು ತಿಂಗಳಲ್ಲಿ 228 ಹಕ್ಕಿ ಪ್ರಭೇದ ಗುರುತು

Vishwanath S
Updated On : 6 Feb 2014, 12:41 pm

ಮೈಸೂರು: ಚಾಮರಾಜನಗರ, ಮಂಡ್ಯ ಮತ್ತು ಮೈಸೂರಿನ ಜಿಲ್ಲೆಗಳಲ್ಲಿ ದಾಖಲಿಸಲಾದ ಹಕ್ಕಿಗಳ ಉಪಸ್ಥಿತಿಯನ್ನು ಮರು ಪರಿಶೀಲಿಸಲು ಕೆ.ಬಿ. ಸದಾನಂದರ ಮಾರ್ಗದರ್ಶನದಲ್ಲಿ ಇತ್ತೀಚೆಗೆ ಸಮೀಕ್ಷೆ ನಡೆಸಲಾಯಿತು.
ಈ ಬಾರಿಯ ಸಮೀಕ್ಷೆಯಲ್ಲಿ 60 ಹಕ್ಕಿ ವೀಕ್ಷಕರು ಭಾಗವಹಿಸಿ, ಇದುವರೆಗೂ ದಾಖಲಿಸಲಾದ 337 ಪ್ರಭೇದದ ಹಕ್ಕಿಗಳಲ್ಲಿ 228 ಅನ್ನು ಎರಡು ತಿಂಗಳ ಅವಧಿಯಲ್ಲಿ ಮರು ದಾಖಲಿಸಿದ್ದಾರೆ.
ಹಕ್ಕಿಗಳ ಚಳಿಗಾಲದ ವಲಸೆ, ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಷಯವಾದರೂ, ಅವುಗಳ ಪಯಣದ ದಾರಿ, ದಿಕ್ಕು, ಉಳಿದುಕೊಳ್ಳುವ ಪ್ರದೇಶಗಳ ನಿಶ್ಚಿತ ಕ್ರಮ, ಕ್ರಮಿಸುವ ದೂರ ಮತ್ತು ವೇಗ ಮುಂತಾದ ವಿವರಗಳ ರಹಸ್ಯವನ್ನು ಇನ್ನೂ ಸಂಪೂರ್ಣವಾಗಿ ಬಿಡಿಸಲಾಗಿಲ್ಲ. ಸರಳವಾದ ವಲಸೆಯ ಅಧ್ಯಯನದ ಪದ್ಧತಿಯ ಹುಡುಕಾಟದ ಫಲ- ವಿನಿಲ್ ಬಟ್ಟೆಯ ಪಟ್ಟಿಯನ್ನು ಬಾತು ಮತ್ತು ಹಂಸಗಳಂತಹ ದೊಡ್ಡ ಹಕ್ಕಿಗಳ ಕೊರಳಿಗೆ ತೊಡಿಸುವುದು. ಈ ಪದ್ಧತಿಯಿಂದ ವಲಸೆ ಬಂದ ಹಕ್ಕಿಗಳನ್ನು ದೂರದಿಂದಲೇ ಗುರುತಿಸಬಹುದು.
ಈ ಬಾರಿ ವೈ29, ಬೈ24 ಮತ್ತು ಕೆ14 ಸಂಖ್ಯೆಯ ಕೊರಳಪಟ್ಟಿ ಇದ್ದ ಮೂರು ಪರ್ವತ ಹಕ್ಕಿಗಳನ್ನು (ಬಾರ್ ಹೆಡೆಡ್ ಗೂಸ್) ಎಂ.ಕೆ. ವಿಶ್ವನಾಥ್, ವಿಜಯಾ- ಸಹನ ಮತ್ತು ಅರುಣ್ ಸಿಂಹ ಅವರು ಗುರುತಿಸಿದ್ದಾರೆ. ಈ ಮೂರು ಹಕ್ಕಿಗಳು ಸುಮಾರು 5 ಸಾವಿರ ಕಿ.ಮೀ. ದೂರದ ಮಂಗೋಲಿಯಾದಿಂದ ಆಗಮಿಸಿವೆ. ಈ ಹಕ್ಕಿಗಳಿಗೆ ಕೊರಳಪಟ್ಟಿ ತೊಡಿಸಿ ಅಧ್ಯಯನದಲ್ಲಿ ತೊಡಗಿರುವ ಮಂಗೋಲಿಯಾದಲ್ಲಿನ ವಿಜ್ಞಾನಿಗಳು, ಮೈಸೂರಿನಲ್ಲಿ ಕಂಡುಬಂದ ಹೆಣ್ಣು ಹಕ್ಕಿಗಳೆಂದು ಮತ್ತು ಕೊರಳಪಟ್ಟಿ ತೊಡಿಸಿದಾಗ ಸುಮಾರು 2500 ಗ್ರಾಂ ತೂಕವಿತ್ತೆಂದು ತಿಳಿಸಿದ್ದಾರೆ.
ಸಂತಾನಾಭಿವೃದ್ಧಿಗೆ ಸುರಕ್ಷಿತ ಸ್ಥಳ: ಉತ್ತರ ಗೋಳಾರ್ಧದಿಂದ ಆಗಮಿಸುವ ಹಕ್ಕಿಗಳ ಜತೆಜತೆಗೆ ಗುಂಪಿನಲ್ಲಿ ಬದುಕಿ ಬಾಳುವ ನಮ್ಮ ಸ್ಥಳೀಯ ಹಕ್ಕಿಗಳು ದೇಶದ ತುಂಬೆಲ್ಲಾ ಆಹಾರವನ್ನರಸಿ ಹೊರಡುತ್ತವೆ. ಮುಂದಿನ ಸಂತಾನಾಭಿವೃದ್ಧಿ ಸಮಯದಲ್ಲಿ ರಂಗನತಿಟ್ಟು, ಕುಕ್ಕರಹಳ್ಳಿ ಅಥವಾ ಕೊಕ್ಕರೆಬೆಳ್ಳೂರುಗಳಂತಹ ಸುರಕ್ಷಿತ ಸ್ಥಳಗಳಲ್ಲಿ ಒಗ್ಗೂಡುತ್ತವೆ. ಹಲವಾರು ಹಕ್ಕಿಗಳು ನಮ್ಮ ಪಶ್ಚಿಮ ಘಟ್ಟಗಳು ಮತ್ತು ಕರಾವಳಿಯಿಂದಲೂ ವಲಸೆ ಬರುವುದುಂಟು. ಪಶ್ಚಿಮ ಕರಾವಳಿಯಿಂದ ಒಳನಾಡಿಗೆ ಆಗಮಿಸುವ ಕಡಲು ತೀರದ ಬೆಳ್ಳಕ್ಕಿ (ರೀಫ್ ಎಗ್ರೆಟ್) ಕೆರೆಗಳಲ್ಲಿ ಒಂಟಿಯಾಗಿ ಆಹಾರವನ್ನರಸುತ್ತಿರುತ್ತವೆ.
ಇವು ವರ್ಷಕ್ಕೆ ಒಂದೆರಡು ಬಾರಿ ಕಾಣಿಸಿಕೊಳ್ಳುತ್ತವೆ. ಇವುಗಳಲ್ಲದೆ, ಸುಂದರ ಹಕ್ಕಿಗಳಾದ ಸರಳ ಸಿಳ್ಳಾರ (ಮಲಬಾರ್ ವಿಷಲಿಂಗ್ ತ್ರಷ್) ಮತ್ತು ಕಂದು ತಲೆ ನೆಲಸಿಳ್ಳಾರ (ಆರೆಂಜ್ ಹೆಡೆಡ್ ತ್ರಷ್) ಪಶ್ಚಿಮ ಘಟ್ಟಗಳಿಂದ ಪೂರ್ವ ಘಟ್ಟಗಳವರೆಗೆ ಹರಡುತ್ತವೆ. ಇವುಗಳನ್ನು ಚಾಮುಂಡಿ ಬೆಟ್ಟ, ಮೇಲುಕೋಟೆಯಂತಹ ಕುರುಚಲು- ಎಲೆಯುದುರು ಕಾಡುಗಳಲ್ಲಿ ಕಾಣಬಹುದು. ಇವುಗಳನ್ನು ವಿಜಯ, ತನುಜ, ಸಹನ, ಷಣ್ಮುಗಂ ಮತ್ತು ಅಭಿಷೇಕ್ ದಾಖಲಿಸಿದ್ದಾರೆ.
ಮೈಸೂರಿನಲ್ಲಿ ಕೆ.ಬಿ. ಸದಾನಂದರ ಮಾರ್ಗದರ್ಶನದಲ್ಲಿ ತಿಂಗಳಿಗೊಮ್ಮೆ ಪರಿಸರ ಅಧ್ಯಯನ ಮಾಡುತ್ತಾ ಹೊಸಬರನ್ನು ಕಾರ್ಯಕ್ಷೇತ್ರಕ್ಕೆ ಪರಿಚಯಿಸುವ ಪರಿಪಾಟ ನಡೆದಿದೆ. ಹೆಚ್ಚಿನ ಮಾಹಿತಿಗೆ ಢಿಢಿಢಿ.ಟಣಡ್ಟ್ಠಜಟಿಛಡ್ಡ್ಠಿಜ.್ಟ್ಠ್ಜ ನಲ್ಲಿ ಪರಿಶೀಲಿಸಬಹುದು.
ವರದಿಯಲ್ಲಿನ ಹಕ್ಕಿಗಳ ಪಟ್ಟಿ
ದೇಶದಲ್ಲಿರುವ ಹಕ್ಕಿಗಳ ಪ್ರಭೇದಗಳು- 1301, ಕರ್ನಾಟದಲ್ಲಿನ ಹಕ್ಕಿಗಳ ಪ್ರಭೇದಗಳು- 540, ಚಾ.ನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಕಂಡುಬಂದ ಹಕ್ಕಿಗಳು 337. ಇದುವರೆಗೂ ದಾಖಲಿಸಲಾದ ಹಕ್ಕಿಗಳ ಪ್ರಭೇದಗಳು 228, ಜ.12 ರಂದು ನಡೆಸಿದ ಗಣತಿಯಲ್ಲಿ ಕಂಡು ಬಂದ ಹಕ್ಕಿಗಳ ಪ್ರಭೇದಗಳು 134. ಬಾತುಕೋಳಿಗಳ ಸಂಖ್ಯೆ ಕಳೆದೆರಡು ದಶಕಗಳಿಗೆ ಹೋಲಿಸಿದರೆ ಗಣನೀಯವಾಗಿ ಇಳಿಮುಖವಾಗಿರುವುದು ಕಂಡುಬಂದಿದೆ. ಹಕ್ಕಿಗಳ ನೆಲೆಗಳಲ್ಲಿ ಅವಶ್ಯಕವಾಗಿರುವ ಆಹಾರ ದೊರಕದಿರುವುದು, ಜೊತೆಗೆ ರಕ್ಷಣೆಯಿಲ್ಲದಿರುವುದು ವಲಸೆ ಹಕ್ಕಿಗಳ ಸಂಖ್ಯೆ ಕ್ಷೀಣಿಸುತ್ತಿರುವುದಕ್ಕೆ ಬಹಳ ಮುಖ್ಯ ಕಾರಣವೆಂದು ಸಮೀಕ್ಷೆಯಿಂದ ಗೊತ್ತಾಗಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement