ಪಕ್ಷ ಸಂಘಟನೆಯಲ್ಲಿ ತೊಡಗಲು ಕರೆ
ಮೈಸೂರು: ಜೆಡಿಎಸ್ ಅಲ್ಪಸಂಖ್ಯಾತರ ಜಾಗೃತಿ ಸಭೆ ಬುಧವಾರ ಎನ್.ಆರ್. ಮೊಹಲ್ಲಾ ಶಿವಾಜಿ ರಸ್ತೆಯ ಎ.ಆರ್.ಕೆ.ಫಂಕ್ಷನ್ ಹಾಲ್‌ನಲ್ಲಿ ನಡೆಯಿತು.
ಫೆ.4ರಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚಾಲನೆ ನೀಡಿದ್ದ ಅಲ್ಪಸಂಖ್ಯಾತರ ಜಾಗೃತಿ ಜಾಥಾವು ಚನ್ನಪಟ್ಟಣ, ಮದ್ದೂರು, ಮಂಡ್ಯಗಳಲ್ಲಿ ಸಭೆ ನಡೆಸಿ ಮೈಸೂರಿಗೆ ಆಗಮಿಸಿತು.
ಬುಧವಾರ ಅಲ್ಪಸಂಖ್ಯಾತರ ಜಾಗೃತಿ ಸಭೆ ನಡೆಸಿದ ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಂ ಅವರು ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಕರೆ ನೀಡಿದರು. ಬಳಿಕ ಹುಣಸೂರು ಮಾರ್ಗವಾಗಿ ಮಡಿಕೇರಿಗೆ ತೆರಳಿ ಅಲ್ಲಿಯೂ ಅಲ್ಪಸಂಖ್ಯಾತರ ಸಭೆ ನಡೆಸುವುದಾಗಿ ತಿಳಿಸಿದರು.
ನಂತರ ಹಾಸನ, ಚಿಕ್ಕಮಗಳೂರು, ಉಡುಪಿ, ಕಾರವಾರಕ್ಕೆ ತೆರಳಿ ಫೆ.9ಕ್ಕೆ ಮೈಸೂರಿನಲ್ಲಿ ನಡೆಯುವ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಪಾಲ್ಗೊಂಡು ಜೆಡಿಎಸ್‌ನ ಶಕ್ತಿ ಪ್ರದರ್ಶನ ಮಾಡಬೇಕು ಎಂದರು.
ಸಭೆಯಲ್ಲಿ ಅಲ್ಪಸಂಖ್ಯಾತರ ಘಟಕದ ರಾಷ್ಟ್ರೀಯ ಅಧ್ಯಕ್ಷ ಫೈರೋಜ್ ಮಹಮ್ಮದ್ ಅಲ್ತಾಫ್, ನಗರ ಜೆಡಿಎಸ್ ಅಧ್ಯಕ್ಷ ರಾಜಣ್ಣ, ಮಾಜಿ ಉಪಮೇಯರ್ ಟಿ. ದೇವರಾಜ್, ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ನಗರ ಅಧ್ಯಕ್ಷ ಅಜೀಜುಲ್ಲಾ ಇದ್ದರು.
ಸಮಾವೇಶಕ್ಕೆ ಸಕಲ ಸಿದ್ಧತೆ
ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಫೆ.9ರಂದು ಜೆಡಿಎಸ್ ಆಯೋಜಿಸಿರುವ ಹಿಂದುಳಿದ ವರ್ಗದ ಬೃಹತ್ ಸಮಾವೇಶದ ಪೂರ್ವಭಾವಿ ಸಭೆ ಬುಧವಾರ ನಡೆಯಿತು. ಸಯ್ಯಾಜಿರಾವ್ ರಸ್ತೆಯ ನಗರ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಂ ಪಕ್ಷದ ಮುಖಂಡರು ಮತ್ತು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೊಡನೆ ಸಭೆ ನಡೆಸಿದರು. ಹಿಂದುಳಿದ ವರ್ಗಗಳ ಈ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಆಗಮಿಸಬೇಕು ಎಂದು ತಿಳಿಸಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಸೇರಿದಂತೆ ಅನೇಕ ಮುಖಂಡರು ಈ ಸಮಾವೇಶದಲ್ಲಿ ಭಾಗವಹಿಸುವರು ಎಂದು ತಿಳಿಸಿದರು. ಸಭೆಯಲ್ಲಿ ಅಲ್ಪಸಂಖ್ಯಾತರ ಘಟಕದ ರಾಷ್ಟ್ರೀಯ ಅಧ್ಯಕ್ಷ ಫೈರೋಜ್ ಮಹಮ್ಮದ್ ಅಲ್ತಾಫ್, ನಗರ ಜೆಡಿಎಸ್ ಅಧ್ಯಕ್ಷ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಎಸ್.ಬಿ.ಎಂ. ಮಂಜು, ಮಾಜಿ ಮೇಯರ್ ಸಂದೇಶ್‌ಸ್ವಾಮಿ, ಮಾಜಿ ಉಪ ಮೇಯರ್ ರವಿಕುಮಾರ್, ಪಾಲಿಕೆ ಸದಸ್ಯರಾದ ನಟರಾಜು, ಅನುಸೂಯ, ಕೆಂಪಣ್ಣ, ರಮೇಶ್ ಇದ್ದರು.