ಭ್ರಷ್ಟಮುಕ್ತ ಭಾರತ ನಿರ್ಮಾಣ ಕಾಂಗ್ರೆಸ್ ಕನಸು
ಹುಣಸೂರು: ಭ್ರಷ್ಟಮುಕ್ತ, ಸುವ್ಯವಸ್ಥಿತ ಪ್ರಜಾಪ್ರಭುತ್ವ ಹಾಗೂ ಬಲಭೀಮ ಭಾರತ ನಿರ್ಮಾಣ ಯುಪಿಎ ಸರ್ಕಾರದ ಕನಸಾಗಿದ್ದು, ಆರ್‌ಟಿಐ, ಪಕ್ಷಾಂತರ ನಿಷೇಧ ಕಾಯ್ದೆಯಂತಹ ಪ್ರಬಲ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ದೇಶದಲ್ಲಿ ಪರಿವರ್ತನೆಯ ಹಾದಿಯನ್ನು ಕಾಂಗ್ರೆಸ್ ತೆರೆದಿಟ್ಟಿದೆ ಎಂದು ಸಂಸದ ಎಚ್.ವಿಶ್ವನಾಥ್ ಹೇಳಿದರು.
ಪಟ್ಟಣದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ. ರಾಜಕೀಯಶಾಸ್ತ್ರ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಮತದಾನದ ಮಹತ್ವ ಕುರಿತು ಪಟ್ಟಣದಲ್ಲಿ ಜಾಥಾ ನಡೆಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.
ಅಂತಿಮ ಎಂ.ಎ. ವಿದ್ಯಾರ್ಥಿ ಸತೀಶ್‌ಕುಮಾರ್, ತೃತೀಯ ಬಿಕಾಂ ವಿದ್ಯಾರ್ಥಿ ಅಭಿಷೇಕ್, ಅಂತಿಮ ಬಿಎ ವಿದ್ಯಾರ್ಥಿ ಮಧು ಕುಮಾರ್ ಮಾತನಾಡಿ, ನೀರಾವರಿ, ಸಾರಿಗೆ, ನಿರುದ್ಯೋಗ, ಮೈಸೂರು- ಮಡಿಕೇರಿ ರೈಲು, ವಿದ್ಯುತ್ ಸಮಸ್ಯೆ ಕುರಿತು ಪ್ರಶ್ನಿಸಿ ತರಾಟೆ ತೆಗೆದುಕೊಂಡರು.
ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿದರು. ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ್, ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಸಿ.ಲೋಹಿತಾಶ್ವ, ಪ್ರಾಧ್ಯಾಪಕರಾದ ಶ್ರೀನಿವಾಸ್, ಡಾ. ಆನಂದ್, ವೆಂಕಟೇಶಯ್ಯ ಮಾತನಾಡಿದರು.