ಮಹಾರಾಣಿ ಮಹಿಳಾ ಕಾಲೇಜಿಗಾಗಿ ಪ್ರತ್ಯೇಕ ಕಟ್ಟಡ
ಮೈಸೂರು: ಮಹಾರಾಣಿ ಮಹಿಳಾ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ವಾಣಿಜ್ಯ ವಿಭಾಗವನ್ನು ವಿಭಜಿಸಿ, ಮಹಾರಾಣಿ ಮಹಿಳಾ ಸರ್ಕಾರಿ ವಾಣಿಜ್ಯ ಕಾಲೇಜು ಆರಂಭಿಸಲಾಗುವುದು. ಈ ಕಾಲೇಜಿಗಾಗಿ ಹೊಸ ಕಟ್ಟಡ ಮತ್ತು ಹಾಸ್ಟೆಲ್ ನಿರ್ಮಿಸಲಾಗುವುದು ಎಂದು ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ನಗರದ ಪಡುವಾರಹಳ್ಳಿ ವಾಲ್ಮೀಕಿ ರಸ್ತೆಯಲ್ಲಿ ಕಾಲೇಜು ಕಟ್ಟಡ ನಿರ್ಮಿಸಲು ಗುರುತಿಸಲಾಗಿರುವ ಜಾಗವನ್ನು ಬುಧವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಲೇಜಿನಲ್ಲಿ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯ ಕೊರತೆ ಇದೆ. ಹೀಗಾಗಿ ವಾಣಿಜ್ಯ ವಿಭಾಗವನ್ನು ಪ್ರತ್ಯೇಕಗೊಳಿಸಿ, ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದರು. ಪಡುವಾರಹಳ್ಳಿಯಲ್ಲಿ 4.26 ಎಕರೆ ಜಾಗದಲ್ಲಿ ಕಾಲೇಜು ಕಟ್ಟಡ ನಿರ್ಮಿಸಿ ವಾಣಿಜ್ಯ ಮತ್ತು ಎಂಬಿಎ ಕೋರ್ಸ್ ಆರಂಭಿಸಲಾಗುವುದು. ಇಲ್ಲಿನ ವಿದ್ಯಾರ್ಥಿನಿಯರಿಗೆ ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿರುವ ಜಾಗದಲ್ಲಿ ಹಾಸ್ಟೆಲ್ ನಿರ್ಮಿಸಲಾಗುವುದು. ಜಾಗ ನೀಡಲು ಎಂಡಿಎ ಒಪ್ಪಿಗೆ ನೀಡಿದೆ. ಇದಕ್ಕೆ ಆಡಳಿತಾತ್ಮಕ ಒಪ್ಪಿಗೆ ಸಿಕ್ಕ ಕೂಡಲೇ ಇದೇ ವರ್ಷದಲ್ಲಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ಶಾಸಕ ವಾಸು, ನಗರಪಾಲಿಕೆ ಸದಸ್ಯ ಪ್ರಶಾಂತ್, ಎಂಡಿಎ ಆಯುಕ್ತ ಎಸ್.ಪಾಲಯ್ಯ ಇದ್ದರು.